ಇವೆಲ್ಲ ಅಭ್ಯಾಸವಾಗಿ ಹೋಗಿದೆ ... ತಾಪ್ಸಿ ಹೀಗೆ ಹೇಳಿದ್ದು ಏಕೆ?

Taapsee Pannu - Final
Published on

ಮುಂಬೈ: ತಾಪ್ಸಿ ಅಭಿನಯದ 'ಹಸೀನ್​ ದಿಲ್ರುಬಾ' ಎಂಬ ಹಿಂದಿ ಚಿತ್ರವು ಕಳೆದ ವಾರವಷ್ಟೇ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿದೆ. ಚಿತ್ರ ನೋಡಿದವರ್ಯಾರೂ ಅಷ್ಟೇನೂ ಒಳ್ಳೆಯ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಸುಮಾರಾಗಿದೆ, ಒಂದು ಸಾರಿ ನೋಡಬಹುದು ಅಂತಷ್ಟೇ ಹೇಳುತ್ತಿದ್ದಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, 'ಚಿತ್ರ ಡಬ್ಬಾ ತರಹ ಇದೆ ...' ಎಂಬ ಅಭಿಪ್ರಯಾವನ್ನೂ ಸೋಷಿಯಲ್​ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದೂ ಉಂಟು.

ಈ ಎಲ್ಲ ವಿಮರ್ಶೆಗಳನ್ನು ಮತ್ತು ಟೀಕೆಗಳನ್ನು ತಾಪ್ಸಿ ಹೇಗೆ ತೆಗೆದುಕೊಳ್ಳುತ್ತಾರೆ? ಟೀಕೆಗಳ ಕುರಿತಾಗಿ ಅವರ ಅಭಿಪ್ರಾಯವೇನು? ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಈ ಕುರಿತು ಮಾತನಾಡಿರುವ ಅವರು, ಇವೆಲ್ಲ ಅಭ್ಯಾಸವಾಗಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ.

'ಇಷ್ಟೊಂದು ಸಿನಿಮಾಗಳಾದವು. ನನ್ನ ಯಾವ ಸಿನಿಮಾ ಸಹ ಔಟ್​ ಆಂಡ್​ ಔಟ್​ ಒಳ್ಳೆಯ ವಿಮರ್ಶೆಗಳನ್ನು ಪಡೆದಿಲ್ಲ. ಯಾಕೆ ನಾನು ಈ ಮಾತನ್ನು ಹೇಳುತ್ತೀನಿ ಎಂದರೆ, ಆ ಎಲ್ಲ ವಿಮರ್ಶೆಗಳನ್ನು ಓದಿದ್ದೇನೆ. ಕೆಲವು ಚಿತ್ರಗಳ ಬಗ್ಗೆ ಬಹಳ ಬೈದಿದ್ದಾರೆ. ಜನ ಬೈದಿರಬಹುದು, ಆದರೆ ನಾನು ಚಿತ್ರರಂಗದಲ್ಲಿ ಮುಂದುವರೆದಿದ್ದೇನೆ. ಕೆಲವು ವಿಮರ್ಶೆಗಳನ್ನು ಓದಿದರೆ, ಈ ಚಿತ್ರರಂಗದ ಸಹವಾಸವೇ ಬೇಡ ಎಂದನಿಸುತ್ತದೆ. ಆದರೆ, ನಾನು ಅದನ್ನೆಲ್ಲ ಪಾಸಿಟಿವ್​ ಆಗಿ ತೆಗೆದುಕೊಂಡೆ' ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.

ತನಗೆ ಮೊದಲು ನಟನೆ ಗೊತ್ತಿರಲಿಲ್ಲ, ಕ್ರಮೇಣ ಕಲಿತೆ ಎನ್ನುವ ತಾಪ್ಸಿ, 'ನಾನು ನನ್ನನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರಬಹುದು. ಆದರೆ, ನನ್ನ ಕೆಲಸವನ್ನು ಬಹಳ ಗಂಭಿರವಾಗಿ ತೆಗೆದುಕೊಳ್ಳುತ್ತೇನೆ. ನೀವು ನನ್ನ ಕೆಲಸದ ಬಗ್ಗೆ ಕಿಚಾಯಿಸಬಹುದು. ಆದರೆ, ನನ್ನ ವೃತ್ತಿಪರತೆಯ ಬಗ್ಗೆ ಮಾತನಾಡುವುದು ಕಷ್ಟ. ಜನ ನನ್ನ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡುವುದನ್ನು ಕೇಳಿದ್ದೇನೆ. ಆದರೆ, ಬೇರೆ ದಾರಿ ಇಲ್ಲ. ಈ ವೃತ್ತಿಯಲ್ಲಿ ಇವೆಲ್ಲ ಮಾಮೂಲಿ' ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net