ಸಲಾರ್ v/s ಕೆಜಿಎಫ್2: ಏಪ್ರಿಲ್ 14ಕ್ಕೆ ಯಾವ ಚಿತ್ರ ಬಿಡುಗಡೆ?

KGF 2
Published on

ಬೆಂಗಳೂರು: ‘ಕೆಜಿಎಫ್ 2’ ಚಿತ್ರವು 2022ರ ಏಪ್ರಿಲ್ 14ಕ್ಕೆ ಬಿಡುಗಡೆ ಯಾಗುತ್ತದೆ ಎಂದು ಚಿತ್ರತಂಡ ಭಾನುವಾರ ಅಧಿಕೃತವಾಗಿ ಘೋಷಿಸಿದೆ. ವಿಷಯ ಕೇಳಿ ಯಶ್ ಅಭಿಮಾನಿಗಳು ಖುಷಿಯಾಗಿದ್ದರೂ, ಇನ್ನೂ ಎಂಟು ತಿಂಗಳು ಕಾಯಬೇಕು ಎಂಬ ಸಣ್ಣ ಬೇಸರದಲ್ಲಿದ್ದಾರೆ. ಇದೆಲ್ಲದರ ಮಧ್ಯೆ, ಚಿತ್ರದ ಬಿಡುಗಡೆಯ ಕುರಿತು ಹಲವು ಪ್ರಶ್ನೆಗಳೆದ್ದಿವೆ. ಪ್ರಮುಖವಾಗಿ, ಏಪ್ರಿಲ್ 14ರಂದು ಪ್ರಭಾಸ್ ಅಭಿನಯದ ‘ಸಲಾರ್’ ಚಿತ್ರ ಬಿಡುಗಡೆ ಮಾಡುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ನಿರ್ವಪಕ ವಿಜಯ್ ಕುಮಾರ್ ಕಿರಗಂದೂರು ಘೋಷಿಸಿದ್ದರು. ಈಗ ಅದೇ ದಿನ, ತಮ್ಮದೇ ನಿರ್ವಣದ ‘ಕೆಜಿಎಫ್ 2’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಹಾಗಾದರೆ, ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತದಾ?

ಖಂಡಿತಾ ಆ ಸಾಧ್ಯತೆ ಇರುವುದಿಲ್ಲ. ತಮ್ಮದೇ ಸಂಸ್ಥೆ ನಿರ್ವಿುಸಿರುವ 2 ಬಹುಕೋಟಿ ವೆಚ್ಚದ ಚಿತ್ರಗಳನ್ನು ಒಂದೇ ದಿನ ಬಿಡುಗಡೆ ಮಾಡಿ, ಕ್ಲಾಷ್ ಮಾಡುವುದಕ್ಕೆ ಯಾವ ನಿರ್ವಪಕ ಸಹ ಮುಂದಾಗುವುದಿಲ್ಲ. ಹಾಗಾದರೆ, ಮುಂದೇನು? ಎರಡರಲ್ಲಿ ಒಂದು ಚಿತ್ರ ಸ್ವಲ್ಪ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಚಿತ್ರವು ಎರಡು ಬಾರಿ ಮುಂದಕ್ಕೆ ಹೋಗಿರುವುದರಿಂದ ಮತ್ತು ಅಭಿಮಾನಿಗಳು ಸಾಕಷ್ಟು ಕಾದಿರುವುದರಿಂದ, ಏಪ್ರಿಲ್ 14ರಂದು ‘ಕೆಜಿಎಫ್ 2’ ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳ ನಿರ್ವಪಕರು ಮತ್ತು ನಿರ್ದೇಶಕರು ಒಬ್ಬರೇ ಆಗಿರುವುದರಿಂದ, ಮಾತಾ ಡಿಕೊಂಡು ‘ಸಲಾರ್’ ಚಿತ್ರವನ್ನು ಸ್ವಲ್ಪ ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಲನ್ ಆಗಿ ಜಗಪತಿ ಬಾಬು: ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ಪ್ರಭಾಸ್​ಗೆ ವಿಲನ್ ಆಗಿ ವಿಜಯ್ ಸೇತುಪತಿ, ಜಾನ್ ಅಬ್ರಹಾಂ, ಜಗಪತಿ ಬಾಬು ಮುಂತಾದವರು ನಟಿಸಬಹುದು ಎಂಬ ಸುದ್ದಿ ಕೇಳಿಬಂದಿತ್ತು. ಈ ಪೈಕಿ ಅಂತಿಮವಾಗಿ ಜಗಪತಿ ಬಾಬು ವಿಲನ್ ಆಗಿ ಆಯ್ಕೆಯಾಗಿದ್ದಾರೆ. ರಾಜಮನ್ನಾರ್ ಎಂಬ ಪಾತ್ರದಲ್ಲಿ ಅವರು ನಟಿಸುತ್ತಿದ್ದು, ಫಸ್ಟ್​ಲುಕ್ ಸೋಮವಾರ ಬೆಳಗ್ಗೆ ಬಿಡುಗಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net