

ಚಿಕ್ಕಮಗಳೂರು: ಕಾಫಿನಾಡಿನ ಪೊಲೀಸರು ಭಾರಿ ಕಳ್ಳರನ್ನೇ ಹಿಡಿದಿದ್ದಾರೆ. ಅಷ್ಟಕ್ಕೂ ಇವರು ಅಂಥಿಂಥ ಕಳ್ಳರಲ್ಲ. ಏಕೆಂದರೆ ಇವರ ಬಳಿ ಕೋಟಿ ರೂಪಾಯಿ ಮೌಲ್ಯದ ಪುರಾತನ ರತ್ನವಿತ್ತು. ಚಿಕ್ಕಮಗಳೂರು ಸಿಇಎನ್ ಇನ್ಸ್ಪೆಕ್ಟರ್ ರಕ್ಷಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದೆ.
ಪುರಾತನ ರತ್ನವನ್ನು ಕದ್ದಿರುವ ಈ ಕಳ್ಳರು ಭಯಂಕರ ಇತಿಹಾಸವನ್ನೇ ಹೊಂದಿದ್ದಾರೆ. ಇವರ ಬಳಿ ನಕಲಿ ನೋಟುಗಳು ಕೂಡ ಪತ್ತೆಯಾಗಿವೆ. ಈ ಕಳ್ಳರಿಂದ 5.5 ಲಕ್ಷ ರೂಪಾಯಿಯಷ್ಟು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು, ಮೈಸೂರು ಶಿವಮೊಗ್ಗ, ಹಾಸನ ಸೇರಿ ಹಲವೆಡೆ ಸಕ್ರಿಯವಾಗಿದ್ದ ಇವರ ತಂಡ, ಮನೆಗಳಿಗೆ ನುಗ್ಗಿ ನಾಯಿಗಳಿಗೆ ವಿಷ ಹಾಕಿ ಕಳ್ಳತನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 3 ಕಾರು, 5 ಮೊಬೈಲ್ ಫೋನ್, ನಕಲಿ ನೋಟುಗಳ ಮುದ್ರಣಕ್ಕೆ ಬಳಸುತ್ತಿದ್ದ ಕಂಪ್ಯೂಟರ್ ಹಾಗೂ ಪ್ರಿಂಟರ್ ಕೂಡ ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾತ್ರವಲ್ಲದೆ ಇವರು ಕೇರಳದ ಹೈಟೆಕ್ ವೇಶ್ಯವಾಟಿಕೆ ದಂಧೆಯಲ್ಲೂ ಪಾಲ್ಗೊಂಡಿದ್ದು, ಅದಕ್ಕೆ ಸಂಬಂಧಿಸಿದ ಕೇಸ್ನಿಂದ ತಲೆಮರೆಸಿಕೊಂಡಿದ್ದರು. ರತ್ನ ಇತ್ಯಾದಿ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.