

ಬೆಂಗಳೂರು: ವರನಟ ಡಾ. ರಾಜ್ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದಂತಹ ಕಷ್ಟದ ಸಂದರ್ಭದಲ್ಲಿ ಸೂಪರ್ಸ್ಟಾರ್ ರಜಿನಿಕಾಂತ್ ಅವರು ಮಾಡಿದ್ದ ಸಹಾಯವನ್ನು ನಟ ಶಿವರಾಜ್ಕುಮಾರ್ ಅವರು ಮೆಲಕು ಹಾಕಿದ್ದಾರೆ.
ಶಿವರಾಜ್ಕುಮಾರ್ ಅವರು ಕಳೆದ ವಾರ ಬಿಡುಗಡೆಯಾದ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಇಡೀ ಸಿನಿಮಾದಲ್ಲಿ ಎರಡು ಬಾರಿ ಮಾತ್ರ ಕಾಣಿಸಿಕೊಂಡರೂ ಆ ಎರಡೂ ಸೀನ್ನಲ್ಲಿ ತಮ್ಮ ಖಡಕ್ ಮ್ಯಾನರಿಸಂನಿಂದ ಎಲ್ಲರ ಗಮನ ಸೆಳೆದಿದ್ದಾರೆ. ತಮಿಳುನಾಡಿನಲ್ಲೂ ಶಿವರಾಜ್ ಕುಮಾರ್ ಅಭಿಮಾನಿ ಬಳಗ ಸೃಷ್ಟಿಯಾಗಿದೆ.
ಜೈಲರ್ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಇದೇ ಸಂದರ್ಭದಲ್ಲಿ ಶಿವರಾಜ್ಕುಮಾರ್ ಅವರು ತಮಿಳು ಮಾಧ್ಯಮಗಳಿಗೂ ಸಂದರ್ಶನ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಜಿನಿ ಅವರು ಮಾಡಿದ್ದ ಸಹಾಯವನ್ನು ಶಿವಣ್ಣ ನೆನೆದಿದ್ದಾರೆ. ಇಡೀ ಕುಟುಂಬ ಅಪ್ಪಾಜಿ ಅಪಹರಣದ ಶಾಕ್ನಲ್ಲಿದ್ದೆವು. ಆ ಸಂದರ್ಭದಲ್ಲಿ ರಜಿನಿ ಸರ್ ಮಾಡಿದ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಜೈಲರ್ ಬಿಡುಗಡೆಯಾದ ನಂತರ ರಜನಿಕಾಂತ್ ನಿಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೀರಾ ಎಂದು ಕೇಳಿದಾಗ, ಹಿಮಾಲಯದಿಂದ ಹಿಂತಿರುಗಿದ ನಂತರ ಅವರನ್ನು ಮೊದಲು ಭೇಟಿಯಾಗಲು ಚೆನ್ನೈನಲ್ಲಿ ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದರು.
ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ನಟಿಸುತ್ತಿದ್ದಾರೆ. ಮುಂದೆ ಹಲವು ತಮಿಳು ಚಿತ್ರಗಳಲ್ಲಿ ನಟಿಸುವುದಾಗಿಯೂ ಶಿವಣ್ಣ ತಿಳಿಸಿದ್ದಾರೆ. (ಏಜೆನ್ಸೀಸ್)