ಮೆಟ್ರೋದಲ್ಲಿ ರೀಲ್ಸ್​​​, ನೃತ್ಯ ಮಾಡುವವರಿಗೆ ಎಚ್ಚರಿಕೆ ನೀಡಿದ ಡಿಎಂಆರ್‌ಸಿ

dmrcl
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ ರೀಲ್ ತಯಾರಕರ ಸ್ವರ್ಗವಾಗಿದೆ. ರೈಲಿನೊಳಗಿನಿಂದ ಪ್ರತಿದಿನ ವಿಚಿತ್ರ ಕೃತ್ಯಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಡಿಎಂಆರ್‌ಸಿ ಹಲವಾರು ಬಾರಿ ಸಲಹೆಯನ್ನು ನೀಡಿದ್ದು, ಇದೀಗ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಎಚ್ಚರಿಕೆ ನೀಡಲಾಗಿದೆ.

ಇದೀಗ ಡಿಎಂಆರ್‌ಸಿ ಮೆಟ್ರೋ ರೈಲುಗಳಲ್ಲಿ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ನೃತ್ಯ ಮಾಡುವವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ತಮಾಷೆಯಾಗಿ ಸಲಹೆ ನೀಡಿದೆ. ಪ್ರಸಿದ್ಧ ಮೀಮ್ಸ್​​ ಜತೆಗೆ ರೈಲಿನಲ್ಲಿ ನೃತ್ಯ ಮಾಡದಂತೆ ಮೆಟ್ರೋ ಸಲಹೆ ನೀಡಿದೆ. ಡಿಎಂಆರ್‌ಸಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಮೀಮ್ಸ್​​ನಲ್ಲಿ ಅವೆಂಜರ್ಸ್ ಚಿತ್ರದ ದೃಶ್ಯ ತೋರಿಸಲಾಗಿದೆ.

ದೆಹಲಿ ಮೆಟ್ರೋದೊಳಗಿನ ಹಲವಾರು ವೀಡಿಯೊಗಳು ವಿವಾದಕ್ಕೆ ಕಾರಣವಾದ ನಂತರ ಮೆಟ್ರೋ ರೈಲುಗಳಲ್ಲಿ ರೀಲ್‌ಗಳನ್ನು ಮಾಡದಂತೆ ಪ್ರಯಾಣಿಕರಿಗೆ ಡಿಎಂಆರ್‌ಸಿ ಕೋರಿದೆ. ಜತೆಗೆ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಎಚ್ಚರಿಸಿದೆ.

ಜನಪ್ರಿಯ ಬಾಲಿವುಡ್ ಗೀತೆ "ಅಸ್ಸಲಾಂ-ಎ-ಇಷ್ಕುಮ್" ಗೆ ಯುವತಿಯೊಬ್ಬಳು ಗಿರಕಿ ಹೊಡೆಯುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಹೀಗೆ ಸೂಚಿಸಲಾಗಿದೆ. ಇದಕ್ಕೂ ಮೊದಲು, ಮೆಟ್ರೋ ರೈಲುಗಳ ಒಳಗೆ ಮತ್ತು ನಿಲ್ದಾಣಗಳಲ್ಲಿ ಮಾಡಿದ ಹಲವಾರು ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಪ್ರಯಾಣಿಕರಿಗೆ ಮನವಿ ಮಾಡಲು ಪ್ರೇರೇಪಿಸಿದೆ.

ಈ ಎಲ್ಲಾ ಘಟನೆಗಳನ್ನು ಗಮನಿಸಿ, ಡಿಎಂಆರ್‌ಸಿ ನರ್ಸರಿ ರೈಮ್ ಅನ್ನು ಬಳಸಿ "ಓಪನ್ ಯುವರ್ ಕ್ಯಾಮೆರಾ, ನಾ ನಾ ನಾ ದೆಹಲಿ ಮೆಟ್ರೋ,", "ಜಾನಿ ಜಾನಿ ಯೆಸ್ ಪಾಪಾ? ಮೆಟ್ರೋದಲ್ಲಿ ರೀಲ್‌ಗಳನ್ನು ತಯಾರಿಸುತ್ತಿದ್ದೀರಾ? ನೋ ಪಾಪಾ" ಎಂಬ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ.
"ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯನ್ನು ದೆಹಲಿ ಮೆಟ್ರೋ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ" ಎಂದು ಪೋಸ್ಟರ್‌ ಕೆಳಗೆ ಕ್ಯಾಪ್ಷನ್​​​ನಲ್ಲಿ ಹಾಕಲಾಗಿದೆ.

ಇತ್ತೀಚೆಗೆ ಮೆಟ್ರೋ ಕೋಚ್‌ನೊಳಗೆ ದಂಪತಿಗಳು ಚುಂಬಿಸುತ್ತಿರುವ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಘಟನೆಯ ನಂತರ, ಡಿಎಂಆರ್‌ಸಿ ಪ್ರಯಾಣಿಕರಿಗೆ ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ತಡೆದಿದೆ. ಪ್ರಯಾಣಿಕರು ಅಂತಹ ಘಟನೆ ನಡೆದರೆ ಮೆಟ್ರೋ ಸಿಬ್ಬಂದಿ/ಸಿಐಎಸ್‌ಇಗೆ ತಕ್ಷಣ ವರದಿ ಮಾಡುವಂತೆ ವಿನಂತಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net