

ಶುಕ್ರವಾರವಷ್ಟೇ ನಿಧನರಾದ ಬಾಲಿವುಡ್ನ ಜನಪ್ರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರ ಸಾವಿನ ನೋವಿನಿಂದ ಇನ್ನೂ ಬಾಲಿವುಡ್ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಸರೋಜ್ ಖಾನ್ ನಿಧನರಾಗಿ ಮೂರು ದಿನಗಳಾದರೂ, ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಲೇ ಇದ್ದಾರೆ.
ಈ ಮಧ್ಯೆ, ಸರೋಜ್ ಖಾನ್ ಮತ್ತು ಶ್ರೀದೇವಿ ಅವರ ಫೇಮಸ್ ಜಗಳದ ಬಗ್ಗೆ ಮತ್ತೊಮ್ಮೆ ಬಾಲಿವುಡ್ನಲ್ಲಿ ಚರ್ಚೆಯಾಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಶ್ರೀದೇವಿ ಮತ್ತು ಸರೋಜ್ ಖಾನ್ ಅವರು ಒಂದು ಕಾಲದಲ್ಲಿ ಬಹಳ ಆಪ್ತರಾಗಿದ್ದರು. ಆ ನಂತರ ಅವರಿಬ್ಬರ ಮಧ್ಯೆ ವೈಮನಸ್ಯ ಉಂಟಾಗಿ ಇಬ್ಬರೂ ದೂರಾಗಿದ್ದರು. ಮತ್ತೊಮ್ಮೆ ಅವರಿಬ್ಬರೂ ಒಂದಾದರೂ, ಹಿಂದಿನ ವೈಭವವನ್ನು ಸೃಷ್ಟಿಸುವುದಕ್ಕೆ ಇಬ್ಬರೂ ಸಾಧ್ಯವಾಗಲೇ ಇಲ್ಲ.
ಇದನ್ನೂ ಓದಿ: ಗುರುಪೌರ್ಣಮಿಯಂದು ದಿಗ್ಗಜರಿಗೆ ನಮನ ಸಲ್ಲಿಸಿದ ತಮನ್
ಇಷ್ಟಕ್ಕೂ ಅವರಿಬ್ಬರ ಮಧ್ಯೆ ಜಗಳ ಆಗುವುದಕ್ಕೆ ಕಾರಣವೇನು? ಈ ಪ್ರಶ್ನೆ ಹಲವು ವರ್ಷಗಳಿಂದ ಇದ್ದೇ ಇದೆ. 80ರ ದಶಕದಲ್ಲಿ ಶ್ರೀದೇವಿ ಅವರ ಹಲವು ಚಿತ್ರಗಳಿಗೆ ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡಿದ್ದರು. ನಿಜ ಹೇಳಬೇಕೆಂದರೆ, ಶ್ರೀದೇವಿ ಅವರ ಯಶಸ್ಸಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಏಕೆಂದರೆ, ಶ್ರೀದೇವಿಗೆ ಸಾಕಷ್ಟು ಜನಪ್ರಿಯತೆ ಮತ್ತು ಯಶಸ್ಸು ತಂದುಕೊಟ್ಟ 'ಮಿಸ್ಟರ್ ಇಂಡಿಯಾ' ಚಿತ್ರದ 'ಹವಾಹವಾಯಿ' ಹಾಡಿಗೆ ನೃತ್ಯ ಸಂಯೋಜಿಸಿದವರು ಅವರೇ.
ಯಾವಾಗ ಈ ಹಾಡು ಹಿಟ್ ಆಯಿತೋ, ಆ ನಂತರ ಶ್ರೀದೇವಿ ಅಭಿನಯದ 'ಲಮ್ಹೆ', 'ನಗೀನಾ', 'ಚಾಂದಿನಿ' ಸೇರಿದಂತೆ ಹಲವು ಚಿತ್ರಗಳಿಗೆ ನೃತ್ಯ ಸಂಯೋಜಿಸಿದ್ದರು. ಹೀಗೆ ಪೀಕ್ನಲ್ಲಿದ್ದ ಈ ಜೋಡಿ, ಒಂದು ಹಂತದಲ್ಲಿ ಜಗಳ ಮಾಡಿಕೊಂಡಿತು. ಅದಾಗಿ ಒಂದು ವರ್ಷದವರೆಗೂ ಶ್ರೀದೇವಿ ಆಗಲೀ, ಸರೋಜ್ ಖಾನ್ ಆಗಲೀ ಪರಸ್ಪರ ಮಾತಾಡಿರಲಿಲ್ಲವಂತೆ. ಆ ನಂತರ ಇಬ್ಬರೂ ವೈಮನಸ್ಯ ಮರೆತು ಹತ್ತಿರವಾದರಂತೆ.
ಎಲ್ಲಾ ಸರಿ, ಅವರಿಬ್ಬರೂ ಜಗಳವಾಡಿಕೊಂಡಿದ್ದು ಯಾಕೆ? ಈ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಸರೋಜ್ ಖಾನ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಅದಕ್ಕೆ ಕಾರಣ ಶ್ರೀದೇವಿ ಅವರ ಹಠವಾಗಿತ್ತಂತೆ. ಶ್ರೀದೇವಿ ಜತೆಜತೆಗೆ, ಬಾಲಿವುಡ್ನ ಬೇರೆಬೇರೆ ನಾಯಕಿಯರಿಗೂ ಸರೋಜ್ ಖಾನ್ ನೃತ್ಯ ನಿರ್ದೇಶನ ಮಾಡುತ್ತಿದ್ದರು. ಅದರಲ್ಲೊಬ್ಬರು ಮಾಧುರಿ ದೀಕ್ಷಿತ್. ಮಾಧುರಿ ಜನಪ್ರಿಯರಾಗಿದ್ದೇ, ಸರೋಜ್ ಖಾನ್ ನಿರ್ದೇಶಿಸಿದ್ದ 'ಏಕ್ ದೋ ತೀನ್ ...' ಹಾಡಿನಿಂದ.
'ತೇಜಾಬ್' ಚಿತ್ರದ ಈ ಹಾಡು ಯಾವಾಗ ಸೂಪರ್ ಹಿಟ್ ಆಗಿ, ಯಾವಾಗಿ ಮಾಧುರಿ ಸಹ ಮುಂಚೂಣಿಗೆ ಬಂದರೋ, ಆಗ ಶ್ರೀದೇವಿಗೆ ಸಹಿಸಲಾಗಲಿಲ್ಲವಂತೆ. ಮಾಧುರಿಗೆ ತನಗಿಂತ ಒಳ್ಳೆಯ ನೃತ್ಯ ಮಾಡಿಸಿದರು ಎಂದು ಶ್ರೀದೇವಿಗೆ ಸರೋಜ್ ಖಾನ್ ಮೇಲೆ ಸಿಟ್ಟಿತ್ತಂತೆ. ಈ ವಿಷಯವನ್ನು ಕೇಳಿ ಬಹಳ ಬೇಸರಗೊಂಡಿದ್ದ ಸರೋಜ್ ಖಾನ್, ಶ್ರೀದೇವಿ ಜತೆಗೆ ಮಾತನಾಡುವುದೇ ಬಿಟ್ಟರಂತೆ.
ಕೊನೆಗೆ ಒಂದು ಹಂತದಲ್ಲಿ ಶ್ರೀದೇವಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಆ ನಂತರ ಸರೋಜ್ ಖಾನ್ ಜತೆಗೆ ಮಾತನಾಡಿ, ಎಲ್ಲವೂ ಸರಿ ಮಾಡಿಕೊಂಡಿದ್ದಾರೆ. ಆ ನಂತರ ಇಬ್ಬರೂ 'ಖುದಾ ಗವಾ', 'ಮಿಸ್ಟರ್ ಬೇಚಾರಾ', 'ಜುದಾಯಿ' ಮುಂತಾದ ಚಿತ್ರಗಳಲ್ಲಿ ಜತೆಗೆ ಕೆಲಸ ಮಾಡಿದರೂ, ಹಿಂದಿನ ಮ್ಯಾಜಿಗ್ ಮರುಸೃಷ್ಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ ಎನ್ನುವುದು ದುರಂತ.