

ಭಾನುವಾರ ಗುರುಪೌರ್ಣಮಿಯಂದು ಚಿತ್ರರಂಗದ ಹಲವು ಕಲಾವಿದರು ಮತ್ತು ತಂತ್ರಜ್ಱರನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ಗುರು ನಮನಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ, ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್. ತಮನ್ ಅವರನು ನಮನ ಸಲ್ಲಿಸಿದ್ದು ಯಾರಿಗೆ ಗೊತ್ತಾ? ಕನ್ನಡ ಚಿತ್ರರಂಗದ ದಿಗ್ಗಜ ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಅವರಿಗೆ.
ರಾಜನ್ ಮತ್ತು ನಾಗೇಂದ್ರ ಅವರು ಸಂಗೀತ ಜೋಡಿ, ಬರೀ ಕನ್ನಡಕ್ಕೆ ಮಾತ್ರ ಸೀಮಿತವಲ್ಲ. ಕನ್ನಡವಲ್ಲದೆ ಬೇರೆ ಭಾಷೆಗಳಲ್ಲೂ ಅವರು ಕೆಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ತಮ್ಮ ಮೆಲೋಡಿ ಹಾಡುಗಳಿಂದ ಅಲ್ಲಿನ ಹಲವು ಜನರ ಮನಸ್ಸು ಗೆದ್ದಿದ್ದಾರೆ.
ಕೆಲವು ವರ್ಷಗಳ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ, ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಅವರು ರಾಜನ್-ನಾಗೇಂದ್ರ ತಮ್ಮ ಗುರುಗಳು ಎಂದು ಹೇಳಿಕೊಂಡಿದ್ದರು. ಮೆಲೋಡಿ ಹಾಡುಗಳಿಗೆ ಸಂಗೀತ ಸಂಯೋಜಿಸುವಲ್ಲಿ ನಿಷ್ಣಾತರಾಗಿರುವ ಜೆಸ್ಸಿ ಗಿಫ್ಟ್, ರಾಜನ್-ನಾಗೇಂದ್ರ ಅವರ ಮೆಲೋಡಿ ಹಾಡುಗಳಿಗೆ ಸಾಟಿ ಇಲ್ಲ ಎಂದು ಹೇಳಿದ್ದರು.
ಈಗ ಎಸ್.ಎಸ್. ತಮನ್ ಸಹ ರಾಜನ್-ನಾಗೇಂದ್ರ ಅವರನ್ನು ಕೊಂಡಾಡಿದ್ದಾರೆ. ಕನ್ನಡದಲ್ಲೂ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ತಮನ್ ಅವರು, ಗುರು ಪೌರ್ಣಿಮೆಯ ಅಂಗವಾಗಿ ರಾಜನ್-ನಾಗೇಂದ್ರ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿ ಸಂಗೀತದ ಎರಡು ಕಣ್ಣುಗಳಾದ “ರಾಜನ್ -ನಾಗೇಂದ್ರ” ರವರು ನನ್ನ ಸಂಗೀತ ಸಾಧನೆಯ ದಾರಿಗೆ ಮಾರ್ಗದರ್ಶನಮಾಡಿ ಚೈತನ್ಯ ತುಂಬಿ ಕನ್ನಡ ತಾಯಿಯ ಸೇವೆ ಮಾಡುವುದಕ್ಕೆ ಪರೋಕ್ಷ ಕಾರಣವಾಗಿರುವ ನಿಮಗೆ ಈ ಗುರುಪೌರ್ಣಮಿಯ ದಿನ ನನ್ನ ಗುರು ನಮನಗಳನ್ನು ಅರ್ಪಿಸುತ್ತಿದ್ದೇನೆ' ಎಂದು ಅವರು ಕನ್ನಡದಲ್ಲೇ ಬರೆದಿದ್ದಾರೆ.
ತಮನ್ ಕನ್ನಡದಲ್ಲಿ ಪೋಸ್ಟ್ ಮಾಡಿರುವುದು ಇದು ಮೊದಲಲ್ಲ. ಕೆಲವು ದಿನಗಳ ಹಿಂದೆ, 'ಯುವರತ್ನ' ಚಿತ್ರದ ಹಾಡುಗಳು ವಿಳಂಬವಾಗುತ್ತಿರುವುದಕ್ಕೆ ಕ್ಷಮೆ ಕೋರಿ ಅವರು ಟ್ವೀಟ್ ಮಾಡಿದ್ದರು. ಈಗ ಗುರು ಪೌರ್ಣಿಮೆಯ ಅಂಗವಾಗಿ ರಾಜನ್-ನಾಗೇಂದ್ರ ಅವರನ್ನು ನೆನಪಿಸಿಕೊಂಡಿರುವುದು ವಿಶೇಷ.