ಚಿರು ಚಿತ್ರಗಳ ಕಥೆ ಏನು?-ಸರ್ಜಾ ಚಿತ್ರಗಳ ನಿರ್ದೇಶಕರು ಹೇಳುವುದೇನು?

Chiranjeevi Sarja 9 June 20
Published on

ಬೆಂಗಳೂರು: ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ ಮೂರು ದಿನಗಳಾಗಿವೆ. ಮಂಗಳವಾರ ಮೂರನೆಯ ದಿನದಂದು ಹಾಲು-ತುಪ್ಪ ಕಾರ್ಯ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬದವರು ಹಾಜರಿದ್ದರು.

ಈ ಮಧ್ಯೆ, ಬಿಡುಗಡೆಯಾಗಬೇಕಿರುವ ಚಿರು ಅಭಿನಯದ ಚಿತ್ರಗಳ ಕಥೆಯೇನು ಎಂಬ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಈ ವರ್ಷ ಈಗಾಗಲೇ ಚಿರು ಅಭಿನಯದ ‘ಖಾಕಿ’, ‘ಆದ್ಯ’ ಮತ್ತು ‘ಶಿವಾರ್ಜುನ’ ಚಿತ್ರಗಳು ಬಿಡುಗಡೆಯಾಗಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್ 27ಕ್ಕೆ ‘ರಣಂ’ ಬಿಡುಗಡೆಯಾಗಬೇಕಿತ್ತು. ಆದರೆ, ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾದ್ದರಿಂದ, ಆ ಚಿತ್ರ ಮುಂದಕ್ಕೆ ಹೋಗಿದೆ. ಇದಲ್ಲದೆ ‘ರಾಜ ಮಾರ್ತಾಂಡ’ ಮತ್ತು ‘ಕ್ಷತ್ರಿಯ’ ಚಿತ್ರಗಳಲ್ಲಿ ನಟಿಸಿದ್ದರು ಚಿರು. ‘ಏಪ್ರಿಲ್’ ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಆ ಚಿತ್ರಗಳ ಕಥೆಯೇನು ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಈ ಪೈಕಿ ‘ರಾಜ ಮಾರ್ತಾಂಡ’ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಚಿರು ಡಬ್ಬಿಂಗ್ ಮಾತ್ರ ಬಾಕಿ ಇದೆಯಂತೆ. ಇದನ್ನೂ ಓದಿ: ಚಿರು ಹಾಲು- ತುಪ್ಪ ಕಾರ್ಯದಲ್ಲಿ ನಿಲ್ಲದ ಮೇಘನಾ ಕಣ್ಣೀರು..

ಚಿರು ಡಬ್ಬಿಂಗ್ ಬಾಕಿ ಇದೆ: ‘ಚಿರಂಜೀವಿ ಸರ್ಜಾ, ಚಿಕ್ಕಣ್ಣ, ದೇವರಾಜ್ ಅವರ ಡಬ್ಬಿಂಗ್ ಬಿಟ್ಟರೆ ಮಿಕ್ಕೆಲ್ಲಾ ಕೆಲಸಗಳು ಮುಗಿದಿವೆ. ಕಳೆದ ವಾರ ನಾವೆಲ್ಲಾ ಚಿತ್ರವನ್ನೂ ನೋಡಿದ್ದೆವು. ಚಿತ್ರ ನೋಡಿ ಮೆಚ್ಚಿಕೊಂಡಿದ್ದ ಅವರು, ಆದಷ್ಟು ಬೇಗ ಡಬ್ಬಿಂಗ್ ಮುಗಿಸುವುದಾಗಿ ಹೇಳಿದ್ದರು. ಅಷ್ಟರಲ್ಲಿ ಹೀಗಾಯಿತು’ ಎನ್ನುತ್ತಾರೆ ನಿರ್ದೇಶಕ ರಾಮನಾರಾಯಣ್.

ಒಂದಿಷ್ಟು ಚಿತ್ರೀಕರಣ ಆಗಬೇಕಿದೆ: ‘ಕ್ಷತ್ರಿಯ’ ಚಿತ್ರದ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದ್ದು, ಇನ್ನಷ್ಟು ಬಾಕಿ ಇದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ವಪಕ ವೆಂಕಟೇಶ್, ‘ಲಾಕ್​ಡೌನ್ ಇಲ್ಲದಿದ್ದರೆ ಇಷ್ಟರಲ್ಲಿ ಎಲ್ಲಾ ಸಂಪೂರ್ಣವಾಗಿರುತಿತ್ತು. ಆದರೆ, ಲಾಕ್​ಡೌನ್​ನಿಂದ ಎಲ್ಲವೂ ತಡವಾಯಿತು. ಈಗಾಗಲೇ ಚಿತ್ರದ ಫಸ್ಟ್ ಹಾಫ್ ಪಕ್ಕಾ ಆಗಿದೆ. ಮೊದಲಾರ್ಧ ಡಬ್ಬಿಂಗ್ ಸಹ ಮುಗಿದಿದೆ. ಇನ್ನು ಸೆಕೆಂಡ್ ಹಾಫ್​ನ ಒಂದಿಷ್ಟು ಚಿತ್ರೀಕರಣ ಆಗಬೇಕಿದೆ. ಹೇಗೆ ಮುಗಿಸಬೇಕು ಎನ್ನುವ ಬಗ್ಗೆ ಯೋಚಿಸುತ್ತಿದ್ದು, ಒಟ್ಟಿನಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ’ ಎನ್ನುತ್ತಾರೆ.

ತಲೆ ಬ್ಲಾಂಕ್ ಆಗಿದೆ: ಇನ್ನು ‘ಏಪ್ರಿಲ್’ ಚಿತ್ರದ ಮುಹೂರ್ತವಾದರೂ, ಚಿರು ಭಾಗದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ‘ನಿಜಕ್ಕೂ ಏನು ಮಾಡಬೇಕು ಗೊತ್ತಾಗುತ್ತಿಲ್ಲ. ತಲೆ ಬ್ಲಾಂಕ್ ಆಗಿದೆ. ಬೇರೆಯವರ ಅಭಿನಯದಲ್ಲಿ ಚಿತ್ರ ಮುಂದುವರಿಸುವುದೋ ಅಥವಾ ಈ ಕಥೆಯನ್ನೇ ಡ್ರಾಪ್ ಮಾಡುವುದೋ ಗೊತ್ತಾಗುತ್ತಿಲ್ಲ. ಈ ಪಾತ್ರ, ಚಿರು ಅವರಿಗೆ ಟೈಲರ್ ಮೇಡ್ ಆಗಿತ್ತು. ಆ ಪಾತ್ರಕ್ಕೆ ಯಾರು ಹೊಂದುತ್ತಾರೆ ಎಂದು ಗೊತ್ತಾಗುತ್ತಿಲ್ಲ. ಯಾವುದಕ್ಕೂ ಮೊದಲು ಚಿತ್ರತಂಡದವರೆಲ್ಲಾ ಒಂದು ಮೀಟಿಂಗ್ ಮಾಡಿ, ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸತ್ಯ ರಾಯಲ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net