

ಕೆಲವು ವರ್ಷಗಳ ಹಿಂದೆ ಚಿರಂಜೀವಿ ಸರ್ಜಾ ಅಭಿನಯದಲ್ಲಿ, ಹರಿಸಂತೋಷ್ ಅಲಿಯಾಸ್ ಅಲೆಮಾರಿ ಸಂತು ಒಂದು ಚಿತ್ರವನ್ನು ನಿರ್ದೇಶಿಸಬೇಕಿತ್ತು. ಅದರ ಹೆಸರು ದೊಡ್ಡೋರು - ಹಿಸ್ಟರಿ ರಿಪೀಟ್ಸ್. ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ. ಚಿರು ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಸಂತು ಕನಸು ನನಸಾಗಲೇ ಇಲ್ಲ.
ದೊಡ್ಡೋರು ಚಿತ್ರಕ್ಕೆ ಸಂತು ಒಂದಿಷ್ಟು ಕೆಲಸ ಮಾಡಿದ್ದರು. ಚಿತ್ರ ಹೇಗಿರುತ್ತದೆ ಎಂಬ ರೆಫರೆನ್ಸ್ ಟ್ರೈಲರ್ ಸಹ ಮಾಡಿಕೊಂಡಿದ್ದರು. ವಿಜ್ಜು ಸಂಗೀತದಲ್ಲಿ ಚಂದನ್ ಶೆಟ್ಟಿ ಹಾಡಿದರೆ, ಹರಿ ಸಂತು ಮತ್ತು ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದರು. ಈ ಟೈಟಲ್ ಹಾಡಿಗೆ ಚಿರು ಅವರ ಹಲವು ಚಿತ್ರಗಳ ತುಣುಕುಗಳು ಹಾಗೂ ಇತರೆ ಆ ಜಾನರ್ ಚಿತ್ರಗಳ ತುಣುಕುಗಳನ್ನ ಆಯ್ಕೆ ಮಾಡಿಕೊಂಡು ಹರಿ ಸಂತೋಷ್ ಮತ್ತು ತಂಡ ಈ ಟ್ರೈಲರ್ ನ ಕಟ್ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರವೇ ಸೆಟ್ಟೇರಲಿಲ್ಲ.
ಈಗ ಸಂತು ಮತ್ತು ಚಿತ್ರತಂಡವು, ಆ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಅಕಾಲಿಕವಾಗಿ ಅಗಲಿದ ತಮ್ಮ ಚಿತ್ರದ ನಾಯಕನಿಗೆ ಕಂಬನಿ ಮಿಡಿದಿದೆ. ಆ ಟ್ರೈಲರ್ನ್ನು ಇದೀಗ ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ನೋಡಿದವರೆಲ್ಲಾ ಚಿರು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 15 ವರ್ಷಗಳ ನಂತರ ರಾಜಮೌಳಿ ಚಿತ್ರದಲ್ಲಿ ಶ್ರೀಯಾ!
ಅಲ್ಲಿಗೆ ಚಿರು ಅಭಿನಯಸದ ಒಂದು ಚಿತ್ರದ ಟ್ರೈಲರ್ ಇದೀಗ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದೆ. ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ಕೆಲವರು, ಈ ಚಿತ್ರವನ್ನು ನಿಲ್ಲಿಸಬೇಡಿ ಎಂದು ಸಲಹೆ ನೀಡಿದರೆ, ಈ ಟ್ರೈಲರ್ನಷ್ಟೇ ಸಿನಿಮಾ ಸಹ ಮೂಡಿ ಬಂದರೆ, ಚಿತ್ರ ಸೂಪರ್ ಹಿಟ್ ಆಗುತ್ತದೆ ಎಂದು ಹೇಳಿದ್ದಾರೆ.