ಅದೊಂದು ಆ್ಯಕ್ಸಿಡೆಂಟ್​​ನಿಂದ ಆಕೆಯ ಮುಖವೇ ಬದಲಾಗಿ ಹೋಯ್ತು ...

Mahima Chaudhary - Final
Published on

90ರ ದಶಕದಲ್ಲಿ ಬಾಲಿವುಡ್​​ನ ಅತ್ಯಂತ ಜನಪ್ರಿಯ ನಟಿ ಎಂದರೆ ಅದು ಮಹಿಮಾ ಚೌಧರಿ. ಶಾರೂಖ್​ ಖಾನ್​ ಅಭಿನಯದ ಪರದೇಸ್​ ಚಿತ್ರದಲ್ಲಿ ಮಿಂಚಿದ ಅವರು, ದಾಗ್​ - ದಿ ಫೈರ್​ ಮುಂತಾದ ಚಿತ್ರಗಳಲ್ಲೂ ನಟಿಸಿದ್ದರು. ಜ್ಯೂನಿಯರ್​ ಮಾಧುರಿ ದೀಕ್ಷಿತ್​ ಎಂದೇ ಜನಪ್ರಿಯರಾಗಿದ್ದ ಮಹಿಮಾ ಚೌಧರಿ ಅದೊಂದು ದಿನ ಚಿತ್ರೀಕರಣಕ್ಕೆ ಹೋಗುವಾಗ ಆ್ಯಕ್ಸಿಡೆಂಟ್​​ಗೆ ತುತ್ತಾದರು. ಆಮೇಲೇನಾಯಿತೋ ಗೊತ್ತಿಲ್ಲ. ಅವರು ಕ್ರಮೇಣ ಚಿತ್ರರಂಗದಿಂದ ಮಾಯವಾದರು.

ಇಷ್ಟಕ್ಕೂ ಮಹಿಮಾ ಚೌಧರಿಗೆ ಅಂದು ಏನಾಗಿತ್ತು? ಈಗ ಹಲವು ವರ್ಷಗಳ ನಂತರ ಅವರು ಕೊನೆಗೂ ಬಾಯಿ ಬಿಟ್ಟಿದ್ದಾರೆ. ಅಂದು ಏನಾಯಿತು? ಅದರ ನಂತರ ಏನೆಲ್ಲಾ ಅನುಭವಿಸಬೇಕಾಯಿತು? ಎಂದು ಸಂದರ್ಶನವೊಂದರಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ.

ಅಜಯ್​ ದೇವಗನ್​ ಅಭಿನಯದ ದಿಲ್​ ಕ್ಯಾ ಕರೇ ಚಿತ್ರದಲ್ಲಿ ನಟಿಸುತ್ತಿದ್ದೆ. ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಒಂದು ದಿನ ಸ್ಟುಡಿಯೋಗೆ ಹೋಗುವಾಗ, ಒಂದು ಕೆಟ್ಟ ಆ್ಯಕ್ಸಿಡೆಂಟ್​​ ಆಯಿತು. ಒಂದು ಟ್ರಕ್​, ನಮ್ಮ ಕಾರನ್ನು ನುಜ್ಜುಗುಜ್ಜು ಮಾಡಿತು. ಕಾರಿನ ಗ್ಲಾಸು ಪುಡಿಪುಡಿಯಾಗಿ ನನ್ನ ಮುಖಕ್ಕೆ ಹಾರಿತ್ತು. ನಾನು ಸತ್ತೇ ಹೋದೆ ಎಂದುಕೊಂಡೆ. ಆ ನಂತರ ಎಷ್ಟೋ ಹೊತ್ತಿನ ನಂತರ ಆಸ್ಪತ್ರೆಗೆ ನನ್ನನ್ನು ಸೇರಿಸಲಾಯಿತು. ಕನ್ನಡಿಯಲ್ಲಿ ನನ್ನ ಮುಖ ನೋಡಿಕೊಂಡಾಗ, ನಿಜಕ್ಕೂ ಭಯವಾಯ್ತು. ನನ್ನ ಮುಖಕ್ಕೆ ಸರ್ಜರಿ ಮಾಡಿದ್ದರು. ಏಕೆಂದರೆ, 67 ಗ್ಲಾಸ್​ ಪೀಸ್​ಗಳು ಸಿಕ್ಕಿಹಾಕಿಕೊಂಡಿದ್ದವು. ಅದನ್ನು ತೆಗೆಯಬೇಕಿದ್ದರೆ, ಸರ್ಜರಿ ಅನಿವಾರ್ಯವಾಗಿತ್ತು. ಆ ನಂತರ ನನ್ನ ಮುಖದ ರೂಪವೇ ಬದಲಾಗಿ ಹೋಯಿತು ಎಂದು ನೆನಪಿಸಿಕೊಂಡಿದ್ದಾರೆ ಮಹಿಮಾ.

ಈ ಅಪಘಾತದ ನಂತರ ಮಹಿಮಾ, ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳಬೇಕಾಯಿತಂತೆ. ಕ್ರಮೇಣ ನಾನೆಲ್ಲಿ ಹೋದೆ ಎಂದು ಜನ ಮಾತಾಡಿಕೊಳ್ಳತೊಡಗಿದರು. ನಾನು ಬಚ್ಚಿಟ್ಟುಕೊಂಡಿದ್ದೆ. ಕ್ರಮೇಣ ನನ್ನ ಮನೆಯವರ ಸಹಕಾರ ಮತ್ತು ಪ್ರೋತ್ಸಾಹಗಳಿಂದ ಹೊರ ಬಂದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆ್ಯಕ್ಸಿಡೆಂಟ್​​ ನಂತರ ಮಹಿಮಾ ಹಲವು ಚಿತ್ರಗಳಲ್ಲಿ ನಟಿಸಿದರಾದರೂ, ಆಕೆ ಮೊದಲಿನಿಂತೆ ಆಗಲು ಸಾಧ್ಯವಾಗಲೇ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net