

ಈ ಹಿಂದೆ ರಾಜಮೌಳಿ ನಿರ್ದೇಶನದ ಛತ್ರಪತಿ ಚಿತ್ರದಲ್ಲಿ ನಾಯಕಿಯಾಗಿದ್ದ ಶ್ರೀಯಾ ಶರಣ್, ಇದೀಗ 15 ವರ್ಷಗಳ ನಂತರ ಮತ್ತೊಮ್ಮೆ ಅವರ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ರಾಜಮೌಳಿ ಬಾಯಿ ಬಿಡದಿದ್ದರೂ, ಖುದ್ದು ಶ್ರೀಯಾ ಹೇಳಿಕೊಂಡಿದ್ದಾರೆ. ಆ ಚಿತ್ರ ಯಾವುದು ಗೊತ್ತಾ? ಆರ್ಆರ್ಆರ್.
ಇದನ್ನೂ ಓದಿ: ಬಿಜಿಯಾಗಿದ್ದವರ ಲೇಜಿ ದಿನಗಳು
ಹೌದು, ಆರ್ಆರ್ಆರ್ ಚಿತ್ರದಲ್ಲಿ ಶ್ರೀಯಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡುವಾಗ ಅವರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಲಾಕ್ಡೌನ್ ಮುಗಿದು ಚಿತ್ರದ ಚಿತ್ರೀಕರಣ ಶುರುವಾದ ಮೇಲೆ, ತಾವು ಹೋಗಿ ಅಭಿನಯಿಸಿ ಬರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಇಷ್ಟಕ್ಕೂ ಈ ಚಿತ್ರೆದಲ್ಲಿ ಶ್ರೀಯಾ ಅವರ ಪಾತ್ರವೇನು ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ಈಗಾಗಲೇ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸುತ್ತಿದ್ದಾರೆ. ಹಾಗಿರುವಾಗ ಶ್ರೀಯಾ ಏನು ಮಾಡಬಹುದು ಎಂದರೆ, ಅಲ್ಲೊಂದು ಟ್ವಿಸ್ಟ್ ಇದೆ. ಛತ್ರಪತಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಅವರು, ಈ ಬಾರಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈಗಾಗಲೇ ಗೊತ್ತಿರುವಂತೆ, ಅಜಯ್ ದೇವಗನ್ ಅವರು ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್ನಲ್ಲಿ ಸಹ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಅವರ ಪತ್ನಿಯಾಗಿ ನಟಿಸುತ್ತಿದ್ದಾರಂತೆ ಶ್ರೀಯಾ. ಚಿತ್ರದ ಫ್ಲಾಶ್ಬ್ಯಾಕ್ನಲ್ಲಿ ಶ್ರೀಯಾ ಪಾತ್ರ ಬರಲಿದ್ದು, ಚಿಕ್ಕ ಪಾತ್ರವಾದರೂ, ಅದೊಂದು ಪ್ರಮುಖ ಪಾತ್ರ ಎಂದು ಅವರೇ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ಒಂದಾಗಲಿದ್ದಾರೆ ರಣವೀರ್- ಕತ್ರಿನಾ
ಇನ್ನು ಆರ್ಆರ್ಆರ್ ಚಿತ್ರದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ಚರಣ್ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೇ 75ರಷ್ಟು ಚಿತ್ರೀಕರಣ ಮುಗಿದಿದ್ದು, 2021ರ ಸಂಕ್ರಾಂತಿ ಸಮಯದಲ್ಲಿ ಚಿತ್ರ ಬಿಡುಗಡೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಲಾಕ್ಡೌನ್ನಿಂದಾಗಿ ಚಿತ್ರೀಕರಣ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ, ಚಿತ್ರದ ಬಿಡುಗಡೆ ಸ್ವಲ್ಪ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ.