

ಹಾಗೆಲ್ಲಾ ಸುಮ್ಮನೆ ಕೂತವರೇ ಅಲ್ಲ, ಅವರೆಲ್ಲ. ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ನಟಿಸುತ್ತಾ ಬಿಜಿಯಾಗಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ಪೋಷಕ ಕಲಾವಿದರೆಲ್ಲಾ, ಲಾಕ್ಡೌನ್ನಿಂದ ಚಿತ್ರೀಕರಣ ಬಂದ್ ಆಗುತ್ತಿದ್ದಂತೆ ಕಳೆದ ಮೂರು ತಿಂಗಳಿಂದ ಮನೆಯಲ್ಲೇ ಬಂಧಿಯಾಗಿದ್ದಾರೆ. ಈ ಮೂರು ತಿಂಗಳಲ್ಲಿ ಏನೆಲ್ಲಾ ಮಾಡಿದರು ಎಂದು, ಕನ್ನಡ ಚಿತ್ರರಂಗದ ಮೂವರು ಜನಪ್ರಿಯ ಮತ್ತು ಬಹುಬೇಡಿಕೆಯ ಕಲಾವಿದರು ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.
ನಿಯಮ ಪಾಲಿಸಿದೆ
‘ಸರ್ಕಾರ ರೂಪಿಸಿದ ನಿಯಮಗಳನ್ನ ಶಿಸ್ತಾಗಿ ಪಾಲಿಸಿದ್ದೇನೆ, ಮನೆ ಬಿಟ್ಟು ಎಲ್ಲೂ ಹೋಗುತ್ತಿಲ್ಲ’ ಎಂದು ನಗುತ್ತಾರೆ ಅಚ್ಯುತ್ ಕುಮಾರ್. ಅವರು ಲಾಕ್ಡೌನ್ ಘೋಷಣೆಯಾದಾಗಿನಿಂದ ಮನೆಯಲ್ಲೇ ಇದ್ದಾರೆ. ಈ ಕುರಿತು ಮಾತನಾಡುವ ಅವರು, ‘ಕೆಲಸವಿಲ್ಲದ ದಿನಗಳು ಹೊಸದೇನಲ್ಲ. ಕೆಲಸವಿಲ್ಲದಾಗ ಹೇಗಿರುತ್ತೇನೋ, ಈಗಲೂ ಹಾಗೆಯೇ ಇದ್ದೀನಿ. ಒಂದಿಷ್ಟು ಓದಿದೆ, ಒಂದಿಷ್ಟು ಚಿತ್ರಗಳನ್ನ ನೋಡಿದೆ. ಮಿಕ್ಕಂತೆ ಮನೆಯವರ ಜತೆಗೆ ಕಾಲ ಕಳೆಯುತ್ತಿದ್ದೇನೆ’ ಎನ್ನುತ್ತಾರೆ ಅಚ್ಯುತ್. ‘ರೆಮೋ’, ‘ಲೆಗಸಿ’, ‘ವಾರ್ಡ್ ನಂಬರ್ 11’ ಮುಂತಾದ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅಚ್ಯುತ್, ‘ಆಗ ಕೆಲಸವಿದ್ದಾಗ ಕೆಲಸ ಮಾಡಿದೆ. ಈಗ ಇದೊಂದು ಕಾಲ. ಸದ್ಯ ಖಾಲಿ ಕೂತಿದ್ದೀನಿ ಎಂಬ ಯಾವುದೇ ಗಾಬರಿ ಇಲ್ಲ. ಏಕೆಂದರೆ, ಇದು ನನ್ನೊಬ್ಬನಿಗೇ ಆಗುತ್ತಿಲ್ಲ. ಎಲ್ಲರಿಗೂ ಆಗುತ್ತಿರುವುದೇ ನನಗೂ ಆಗುತ್ತಿರುವುದು. ಹಾಗಾಗಿ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ’ ಎನ್ನುತ್ತಾರೆ ಅಚ್ಯುತ್.
ಮೊದಲು ಖುಷಿ; ಆಮೇಲೆ ಭಯ
ಚಿತ್ರೀಕರಣ ನಿಲ್ಲಿಸಿದ ಮೊದಲ ಐದಾರು ದಿನಗಳ ಕಾಲ ಬಹಳ ಖುಷಿಯಾಗಿದ್ದರಂತೆ ಪದ್ಮಜಾ ರಾವ್. ‘ಮಕ್ಕಳಿಗೆ ಬೇಸಿಗೆ ರಜೆ ಬಂದಾಗ ಖುಷಿಯಾಗಿರುತ್ತಾರಲ್ಲ, ನಾನೂ ಖುಷಿಯಾಗಿದ್ದೆ. ಬೆಳಿಗ್ಗೆ ಬೇಗ ಏಳುವ ಹಾಗಿಲ್ಲ, ಶೂಟಿಂಗ್ಗೆ ಹೋಗುವ ಹಾಗಿಲ್ಲ ಎಂದು ಒಂದಿಷ್ಟು ದಿನ ಎಂಜಾಯ್ ಮಾಡಿದೆ. ಮೂರ್ನಾಲ್ಕು ವಾರಗಳ ಕಾಲ ಲಾಕ್ಡೌನ್ ಮುಂದುವರೆದಾಗ ಭಯ ಶುರುವಾಯ್ತು. ಸುಮ್ಮನೆ ಕೂತು ಸಾಕಾಯ್ತು. ಎಷ್ಟು ದಿನ ಅಂತ ಮುಂದೇನು ಎಂದು ಹೆದರುತ್ತಾ ಕೂರೋದು? ಅದರಿಂದ ಆಚೆ ಬರಲೇ ಬೇಕು. ಹಾಗಾಗಿ ‘ಒಂದು ಗಿಫ್ಟ್ನ ಕಥೆ’ ಎಂಬ ಕಿರುಚಿತ್ರ ಮಾಡಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಪದ್ಮಜಾ ರಾವ್. ‘ಒಂದು ಗಿಫ್ಟ್ನ ಕಥೆ’, ಪದ್ಮಜಾ ನಿರ್ದೇಶಿಸಿದ ಒಂದು ಕಿರುಚಿತ್ರ. ಲಾಕ್ಡೌನ್ ಸಮಯದಲ್ಲಿ ಸಂಪೂರ್ಣ ಮನೆಯಲ್ಲೇ ಕೂತು ಮಾಡಿದ ಚಿತ್ರ ಅದು. ‘ಕಿರುಚಿತ್ರ ಮಾಡಿದ ನಾಲ್ಕು ವಾರಗಳಿವೆಯಲ್ಲ, ನನ್ನ ಲೈಫ್ನಲ್ಲೇ ಮರೆಯುವುದಕ್ಕೆ ಸಾಧ್ಯವಿಲ್ಲ. ಚಿತ್ರಗಳಲ್ಲಿ ನಾನು ಪೋಷಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತೇನೆ. ಆದರೆ, ಈ ಚಿತ್ರ ಮಾಡುವಾಗ ನಾನೇ ಹೀರೋ, ನಾನೇ ಹೀರೋಯಿನ್ ಎಂಬ ಭಾವನೆ ನನ್ನಲ್ಲಿತ್ತು. ಅಷ್ಟೊಂದು ಸಂತೋಷವಾಗಿದ್ದ ನನಗೆ, ಕ್ರಮೇಣ ಸಿನಿಮಾ ಮುಗಿಯುತ್ತಿದ್ದಂತೆ, ಮತ್ತೆ ಭಯ ಶುರುವಾಯ್ತು. ಖಾಲಿ ಕೂರೋದು ಒಂದು ಕಡೆಯಾದರೆ, ಬ್ಯಾಂಕ್ ಬ್ಯಾಲೆನ್ಸ್ ಸಹ ಕಡಿಮೆಯಾಗುತ್ತಿದೆ’ ಎನ್ನುತ್ತಾರೆ ಪದ್ಮಜಾ. ಈ ಮಧ್ಯೆಯೇ, ‘ಒಂದು ಗಿಫ್ಟ್ನ ಕಥೆ’ ನೋಡಿರುವವರೊಬ್ಬರು, ಚಿತ್ರ ನಿರ್ದೇಶಿಸಿಕೊಡುವುದಕ್ಕೆ ಆಫರ್ ಕೊಟ್ಟಿದ್ದಾರಂತೆ. ‘ಐದಾರು ವರ್ಷಗಳಿಂದ ತಲೆಯಲ್ಲೊಂದು ಕಥೆ ಇತ್ತು. ಆ ಕಥೆ ಚಿತ್ರವಾಗುತ್ತಿದೆ. ಸದ್ಯಕ್ಕೆ ಅದರಲ್ಲೇ ಮುಳುಗಿದ್ದೇನೆ. ಎಲ್ಲಾ ಅಂದುಕೊಂಡಂತೆ ಆದರೆ, ಆಗಸ್ಟ್ ಕೊನೆಯ ಹೊತ್ತಿಗೆ ಚಿತ್ರ ಶುರುವಾಗಬಹುದು’ ಎನ್ನುತ್ತಾರೆ ಪದ್ಮಜಾ ರಾವ್.
ಸಾಕಪ್ಪಾ ಅನಿಸಿಬಿಟ್ಟಿದೆ!
‘ನಾನು ಯಾವತ್ತೂ ಈ ರೀತಿ ಮನೆಯಲ್ಲಿ ಕೂತಿದ್ದೇ ಇಲ್ಲ. ಜೀವನದಲ್ಲಿ ಒಂದು ಉದ್ದೇಶವೇ ಇಲ್ಲ. ಬೆಳಿಗ್ಗೆ ಎದ್ದು ಏನು ಮಾಡಬೇಕು ಅಂತ ಗೊತ್ತಿಲ್ಲ. ನಿಜಕ್ಕೂ ಸಾಕಪ್ಪಾ ಎಂದನಿಸಿಬಿಟ್ಟಿದೆ’ ಎನ್ನುತ್ತಾರೆ ಅವಿನಾಶ್.
ಲಾಕ್ಡೌನ್ಗೂ ಮುನ್ನ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದ ಅವರು, ಲಾಕ್ಡೌನ್ ನಂತರ ಮನೆಬಿಟ್ಟು ಹೋಗಿದ್ದೇ ಕಡಿಮೆಯಂತೆ. ‘ಮೂರ್ನಾಲ್ಕು ಬಾರಿ ಅಂಗಡಿಗೆ ಹೋಗಿದ್ದು ಬಿಟ್ಟರೆ ಎಲ್ಲೂ ಹೋಗಿಲ್ಲ. ಮನೆಯಲ್ಲೇ ಇದ್ದೇನೆ. ಮಾಳವಿಕಾ ಟಾಸ್ಕ್ ಫೋರ್ಸ್ ಚೀಫ್ ಆದ ಮೇಲೆ ಬಿಜಿಯಾದರು. ನಾನು, ಮಗನ ಜತೆ ಮನೆಯಲ್ಲೇ ಇದ್ದೇನೆ. ಪೇಪರ್ ಓದೋದು, ಟಿವಿ ನೋಡೋದು, ವ್ಯಾಯಾಮ ಮಾಡೋದು, ಸ್ನೇಹಿತರಿಗೆ ಫೋನ್ ಮಾಡೋದು ... ಹೀಗೆ ಟೈಂಪಾಸ್ ಮಾಡುತ್ತಿದ್ದೀನಿ. ಏನು ಮಾಡಿದರೂ ಎಷ್ಟು ತಾನೇ ಮಾಡೋಕೆ ಸಾಧ್ಯ?’ ಎಂದು ಪ್ರಶ್ನಿಸುತ್ತಾರೆ ಅವರು.