

ರಣವೀರ್ ಸಿಂಗ್ ಬಾಲಿವುಡ್ಗೆ ಪದಾರ್ಪಣೆ ಮಾಡಿ 10 ವರ್ಷಗಳಾದವು. ಇತ್ತ ನಟಿ ಕತ್ರಿನಾ ಕೈಫ್ ಬಿಟೌನ್ಗೆ ಆಗಮಿಸಿ 17 ವರ್ಷಗಳಾದವು. ಇಬ್ಬರ ಬತ್ತಳಿಕೆಯಲ್ಲಿ ಸಾಕಷ್ಟು ಹಿಟ್ ಚಿತ್ರಗಳಿವೆ. ಆದರೆ, ರಣವೀರ್ ಮತ್ತು ಕತ್ರಿನಾ ಒಂದೇ ಒಂದು ಬಾರಿ ತೆರೆಮೇಲೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇದೀಗ ಅದನ್ನು ಕಣ್ತುಂಬಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್, ಈ ಜೋಡಿಯನ್ನು ಮೊದಲ ಬಾರಿ ತೆರೆಮೇಲೆ ಒಂದಾಗಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ!
ಬಾಲಿವುಡ್ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ನಿರ್ದೇಶಕಿ ಜೋಯಾ, ಗ್ಯಾಂಗ್ಸ್ಟರ್ ಕಥಾಹಂದರವುಳ್ಳ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದು, ಆ ಚಿತ್ರದಲ್ಲಿ ರಣವೀರ್ ಸಿಂಗ್ ಗ್ಯಾಂಗಸ್ಟರ್ ಪಾತ್ರ ನಿಭಾಯಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ರಣವೀರ್ ಸಹ ಕಥೆ ಕೇಳಿ ಇಷ್ಟಪಟ್ಟಿದ್ದು, ಲಾಕ್ಡೌನ್ ಮುಗಿದ ಬಳಿಕ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಹೀಗಿರುವಾಗಲೇ ಇದೇ ಚಿತ್ರದಲ್ಲಿ ರಣವೀರ್ಗೆ ಜೋಡಿಯಾಗಿ ಯಾರು ನಟಿಸಲಿದ್ದಾರೆಂಬ ಚರ್ಚೆ ನಡೆದಿತ್ತು. ಆಗ ಜೋಯಾಗೆ ಮೊದಲು ಕಾಣಿಸಿದ್ದು ಕತ್ರಿನಾ ಕೈಫ್. ಸಿನಿಮಾ ಬಗ್ಗೆ ಅವರನ್ನೂ ಸಂರ್ಪಸಿದ್ದು, ಕತ್ರಿನಾ ಕಡೆಯಿಂದ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗುತ್ತಿದೆ. ಎಲ್ಲ ಅಂದುಕೊಂಡಂತೆ ಈ ಸಿನಿಮಾ ಸೆಟ್ಟೇರಿದರೆ, ಮೊದಲ ಬಾರಿ ರಣವೀರ್ವುತ್ತು ಕತ್ರಿನಾ ತೆರೆಹಂಚಿಕೊಂಡಂತಾಗುತ್ತದೆ. ಇತ್ತ ಜೋಯಾ ಮತ್ತು ರಣವೀರ್ ಬಗ್ಗೆ ಹೆಚ್ಚೇನು ಹೇಳುವ ಅವಶ್ಯಕತೆ ಇಲ್ಲ. ಈ ಹಿಂದೆ ಈ ಜೋಡಿ ‘ದಿಲ್ ಧಡ್ಕನೇ ದೋ’, ‘ಬಾಂಬೆ ಟಾಕೀಸ್’, ‘ಗಲ್ಲಿ ಬಾಯ್’ ಸಿನಿಮಾಗಳಲ್ಲಿ ಕೆಲಸ ಮಾಡಿತ್ತು. ಇದೀಗ ನಾಲ್ಕನೇ ಸಿನಿಮಾಕ್ಕೆ ತಯಾರಿ ನಡೆಸಿದ್ದು, ಲಾಕ್ಡೌನ್ ಹೊತ್ತಲ್ಲೇ ಕಥೆಯನ್ನು ಲಾಕ್ ಮಾಡಲಾಗಿದೆ. ‘ಸೂರ್ಯವಂಶಿ’ಯಲ್ಲಿ ರಣವೀರ್ ಮತ್ತು ಕತ್ರಿನಾ ನಟಿಸಿದ್ದಾರಾದರೂ, ಜೋಡಿಯಾಗಿ ಕಾಣಿಸಿ ಕೊಂಡಿಲ್ಲ. -ಏಜೆನ್ಸೀಸ್