ಬಾಲಿವುಡ್​ನ ಈ ಬಯೋಪಿಕ್​ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲ್ಲ!

yruazf1xdsqjwlvk_1581937895
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಾಕಷ್ಟು ಸಿನಿಮಾಗಳ ಬಿಡುಗಡೆ ಮುಂದಕ್ಕೆ ಹೋಗಿರುವುದು ಗೊತ್ತಿರುವ ವಿಚಾರ. ಇನ್ನು ಕೆಲವು ಓಟಿಟಿ ಪ್ಲಾಟ್​ಫಾರ್ಮ್​ ಮೊರೆ ಹೋಗಿ ಬಿಡುಗಡೆಗೆ ಸಿದ್ಧವಾಗಿವೆ. ಇದೀಗ ಬಾಲಿವುಡ್​ನ ಬಹುನಿರೀಕ್ಷಿತ ಬಯೋಪಿಕ್​ ಸಿನಿಮಾವೊಂದು ಚಿತ್ರಮಂದಿರ ಬದಿಗಿರಿಸಿ, ಓಟಿಟಿಯತ್ತ ಮುಖ ಮಾಡಿದೆ.

ಕರಣ್​ ಜೋಹಾರ್​ ಸೇರಿ ಒಟ್ಟು ನಾಲ್ವರು ನಿರ್ಮಾಪಕರು ನಿರ್ಮಾಣ ಮಾಡಿರುವ ‘ಗುಂಜನ್​ ಸಕ್ಸೆನಾ; ದಿ ಕಾರ್ಗಿಲ್​ ಗರ್ಲ್​’ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ನೆಟ್​ಪ್ಲಿಕ್ಸ್​ನಲ್ಲಿ ಪ್ರಸಾರ ಕಾಣಲಿದೆ. ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್​ ಮುಖ್ಯಭೂಮಿಕೆ ನಿಭಾಯಿಸಿರುವ ‘ಗುಂಜನ್​ ಸಕ್ಸೆನಾ; ದಿ ಕಾರ್ಗಿಲ್​ ಗರ್ಲ್​’ ಚಿತ್ರ, ಏರ್​ಫೋರ್ಸ್ ಪೈಲಟ್​ ಗುಂಜನ್​ ಅವರ ಬಯೋಪಿಕ್​. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಈ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಂದೂಡಲ್ಪಿಟ್ಟಿತ್ತು. ಇದೀಗ ನೇರವಾಗಿ ನೆಟ್​ಪ್ಲಿಕ್ಸ್​ಗೆ ಎಂಟ್ರಿಕೊಟ್ಟಿದೆ.

ಅಂದಹಾಗೆ, 1999ರಲ್ಲಿ ಕಾರ್ಗಿಲ್​ ಯುದ್ಧದ ವೇಳೆಯಲ್ಲಿ ಏರ್​ಫೋರ್ಸ್​ನ ಮೊದಲ ಮಹಿಳಾ ಪೈಲಟ್​ ಗುಂಜನ್​ ಸಕ್ಸೆನಾ, ಚೀತಾ ಏರ್​ಕ್ರಾಪ್ಟ್​ ಏರಿ ಯುದ್ಧ ಭೂಮಿಯಲ್ಲಿದ್ದ ಹಲವು ಭಾರತೀಯ ಸೈನಿಕರನ್ನು ರಕ್ಷಿಸಿದ್ದರು. ಅವರ ಆ ಸಾಹಸವನ್ನೇ ಕಥೆಯನ್ನಾಗಿಸಿಕೊಂಡು ಮತ್ತು ಪೈಲಟ್​ ಆಗಲೇಬೇಕು ಎಂದು ಹಠ ಹಿಡಿದು ಕನಸು ನನಸು ಮಾಡಿಕೊಂಡ ಹಿನ್ನೆಲೆಯೂ ಈ ಸಿನಿಮಾದ ಕಥಾಹಂದರ.

ಓಟಿಟಿಯಲ್ಲಿ ಬಿಡುಗಡೆ ಆಗಲಿರುವ ಬಗ್ಗೆ ಕರಣ್​ ಜೋಹರ್​ ಅಸಲಿ ಗುಂಜನ್​ ಸಕ್ಸೆನಾ ಬಗೆಗಿನ ಕಿರು ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದು, ಶೀಘ್ರದಲ್ಲಿ ಬಿಡುಗಡೆ ದಿನಾಂಕವನ್ನೂ ಘೋಷಿಸುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net