

ಬೆಂಗಳೂರು: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇನ್ನೇನು ಫೆಬ್ರವರಿ 24ರಂದು ತೆರೆಗೆ ಬರಬೇಕಿತ್ತು. ಸದ್ಯದ ಲೆಕ್ಕಾಚಾರ ನೋಡಿದರೆ ಅದು ಅಸಾಧ್ಯ ಎನಿಸಿದರೂ, ‘ನಾವು ಅದೇ ದಿನದಂದೇ ಚಿತ್ರಮಂದಿರಕ್ಕೆ ಬರಲಿದ್ದೇವೆ’ ಎಂದು ನಿರ್ದೇಶಕ ಅನೂಪ್ ಭಂಡಾರಿ ಈ ಹಿಂದೆಯೇ ಹೇಳಿದ್ದಾರೆ. ಹಾಗಾಗಿ ಮುಂದಿನದನ್ನು ಕಾದು ನೋಡಬೇಕಿದೆ. ಹೀಗಿರುವಾಗ ಕೆಲ ದಿನಗಳ ಹಿಂದಷ್ಟೇ ಇದೇ ಚಿತ್ರಕ್ಕೆ ದೈತ್ಯ ಒಟಿಟಿ ಸಂಸ್ಥೆಯೊಂದು ಬರೋಬ್ಬರಿ 100 ಕೋಟಿ ರೂ. ಆಫರ್ ನೀಡಿದ ಸುದ್ದಿ ಹರಿದಾಡಿತ್ತು. ಇದೀಗ ಆ ಸುದ್ದಿ ನಿಜವೆಂದು ಚಿತ್ರದ ನಿರ್ವಪಕ ಜಾಕ್ ಮಂಜು ಒಪ್ಪಿಕೊಂಡಿದ್ದಾರೆ.
‘ನಮ್ಮ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಒಟಿಟಿಯಿಂದ 100 ಕೋಟಿ ಆಫರ್ ಬಂದಿದ್ದು ನಿಜ. ಆದರೆ, ಸಿನಿಮಾವನ್ನು ದೊಡ್ಡ ಪರದೆಯಲ್ಲಿಯೇ ನೋಡಿ ಸವಿಯಬೇಕು. ಚಿತ್ರದ ಪ್ರತಿ ಫ್ರೇಮ್ ಅಷ್ಟೇ ಅದ್ದೂರಿತನದಿಂದ ಕೂಡಿದೆ. ಒಂದಿಡಿ ಕುಟುಂಬ ಒಟ್ಟಿಗೆ ಕುಳಿತು ನೋಡಬೇಕಾದ ಚಿತ್ರವಿದು’ ಎಂದಿದ್ದಾರೆ. ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರ, 3ಡಿಯಲ್ಲಿಯೂ ಸಿದ್ಧವಾಗಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಚಿತ್ರಕ್ಕೆ ವಿಲಿಯಮ್ ಡೇವಿಡ್ ಛಾಯಾಗ್ರಹಣವಿದೆ.