

Yashwant Sardeshpande : ಕನ್ನಡ ಸಿನಿಮಾ ರಂಗದ ಹಿರಿಯ ರಂಗಕರ್ಮಿ, ಖ್ಯಾತ ನಾಟಕಕಾರ, ನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿಂದು (ಸೆ.29) ಕೊನೆಯುಸಿರೆಳೆದಿದ್ದಾರೆ.
ಯಶವಂತ ಅವರು ನಿನ್ನೆ ರಾತ್ರಿಯಷ್ಟೇ ಧಾರವಾಡದಲ್ಲಿ ಪ್ರದರ್ಶನ ನೀಡಿದ್ದರು. ಇಂದು ಬೆಳಗ್ಗೆ 8.30ಕ್ಕೆ ಬೆಂಗಳೂರಿಗೆ ಮರಳಿದರು. 9.30ರ ಸುಮಾರಿಗೆ ಮನೆಯಲ್ಲಿ ಕುಳಿತಿರುವಾಗ ಹಾರ್ಟ್ ಅಟ್ಯಾಕ್ ಆಗಿದೆ. ತಕ್ಷಣ ಆಸ್ಪತ್ರೆಗೆ ಹೋದರು ಯಾವುದೇ ಪ್ರಯೋಜನವಾಗಿಲ್ಲ. ಕೇವಲ 60ನೇ ವಯಸ್ಸಿನಲ್ಲಿ ಯಶವಂತ ಅವರು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಯಶವಂತ ಅವರ ಮರಣ ಕುಟುಂಬ ವರ್ಗ, ಸಂಬಂಧಿಕರಿಗೆ ಮಾತ್ರವಲ್ಲದೆ, ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಯಶವಂತ್ ಅವರು 'ನಗೆಯ ಸರ್ದಾರ್' ಅಥವಾ 'ನಗೆ ನಾಟಕಗಳ ಬಾದ್ಷಾ' ಎಂದು ಖ್ಯಾತರಾಗಿದ್ದರು. ವಿಶೇಷವಾಗಿ ಹಾಸ್ಯ ನಾಟಕಗಳಲ್ಲಿ ಹೆಸರುವಾಸಿಯಾಗಿದ್ದರು. ಹುಬ್ಬಳ್ಳಿಯಲ್ಲಿ ಬೆಳೆದ ಯಶವಂತ, ಬಾಲ್ಯದಿಂದಲೇ ಸಿನಿಮಾ ಮತ್ತು ನಾಟಕಗಳ ಮೇಲೆ ಆಕರ್ಷಿತರಾಗಿದ್ದರು. ಶಾಲಾ ದಿನಗಳಲ್ಲಿ ಶಾಲೆಗೆ ಹೋಗದೆ ಸಿನಿಮಾಗಾರಗಳಲ್ಲಿ ಕಾಲ ಕಳೆಯುತ್ತಿದ್ದರು. ಗ್ರಾಮಗಳಲ್ಲಿ ಚಾರ್ಲಿ ಚ್ಯಾಪ್ಲಿನ್‌ನ ಅನುಕರಣ ನಟನೆ ಮಾಡಿ ಪ್ರದರ್ಶನ ನೀಡುತ್ತಿದ್ದರು. ನಂತರ, ಜಯತೀರ್ಥ ಜೋಶಿಯವರ ಕಾರ್ಯಕ್ರಮದಲ್ಲಿ ತರಬೇತಿ ಪಡೆದು, ನೀನಾಸಂನಲ್ಲಿ ನಟನೆ ಕಲಿಯಲು ಹೋಗಿ ನಿರ್ದೇಶನದಲ್ಲಿ ಪದವಿ ಪಡೆದರು. ಇದು ಅವರ ರಂಗಭೂಮಿ ಜೀವನದ ಆರಂಭವಾಯಿತು.
ಯಶವಂತ ಅವರು 17 ಮಂದಿ ರಂಗಕರ್ಮಿಗಳ ತಂಡ 'ರಂಗವರ್ತುಲ' ಸ್ಥಾಪಿಸಿ ರಂಗಭೂಮಿ ಆರಂಭಿಸಿದರು. ವಾರ್ಷಿಕವಾಗಿ 100 ರಿಂದ 120 ನಾಟಕಗಳನ್ನು ಕರ್ನಾಟಕ ಮತ್ತು ವಿದೇಶಗಳಲ್ಲಿ ಪ್ರದರ್ಶಿಸುತ್ತಿದ್ದರು. ಅವರ ನಾಟಕಗಳು ಸಾವಿರಾರು ಪ್ರೇಕ್ಷಕರನ್ನು ಆಕರ್ಷಿಸಿ, ಹಲವು ಶೋಗಳು ನಡೆದಿವೆ.
ಮರಾಠಿ ನಾಟಕದ ಕನ್ನಡ ಅನುವಾದ ಹಾಗೂ ಜನಪ್ರಿಯ ಹಾಸ್ಯ ನಾಟಕ ಆಲ್ ದಿ ಬೆಸ್ಟ್, ರಾಶಿಚಕ್ರ, ಸಹಿ ರೆ ಸಹಿ, ದಿಲ್ ಮಾಂಗೆ ಮೋರ್, ಒಲವೆ ಜೀವನ ಸಕ್ಷಾತ್ಕಾರ ಹಾಗೂ ಸೂಪರ್ ಸಂಸಾರ... ಯಶವಂತ ಅವರ ಪ್ರಮುಖ ನಾಟಕಗಳು. ಇದಿಷ್ಟೇ ಅಲ್ಲದೆ, ನಟ, ನಿರ್ದೇಶಕ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅವರ ನಿರ್ದೇಶನ ಹಾಗೂ ನಿರ್ಮಾಣದ ಪ್ರಮುಖ ಸಿನಿಮಾ "ಇದ್ಯ ಮಾದ್ಯಾರ". ಇದರಲ್ಲಿ ಸ್ವತಃ ಅವರೇ ನಟನೆ ಸಹ ಮಾಡಿದ್ದಾರೆ. ಕನ್ನಡದ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ನಟ ರಮೇಶ್ ಅರವಿಂದ್ ಅವರ ಚೊಚ್ಚಲ ನಿರ್ದೇಶನದ ಹಾಗೂ ಸಕಲಕಲಾ ವಲ್ಲಭ ಕಮಲ್ ಹಾಸನ್ ನಟನೆಯ ಸೂಪರ್ ಹಿಟ್ ರಾಮ ಶಾಮ ಭಾಮ ಸಿನಿಮಾಗೆ ಕತೆ ಬರೆದ ಖ್ಯಾತಿ ಯಶವಂತ ಅವರಿಗೆ ಸಲ್ಲುತ್ತದೆ. ಇಡೀ ಸಿನಿಮಾ ಪೂರ್ತಿ ಹಾಸ್ಯವೇ ತುಂಬಿದ್ದು, ಚಿತ್ರಮಂದಿರಗಳಲ್ಲಿ ಈ ಸಿನಿಮಾ ಶತದಿನ ಪೂರೈಸಿತು.
ಹಿರಿಯ ರಂಗಕರ್ಮಿ, ಸಿನಿಮಾ ನಟ, ನಿರ್ದೇಶಕ ಯಶವಂತ್ ಸರ್ ದೇಶಪಾಂಡೆ ಅವರ ಹಠಾತ್ ನಿಧನಕ್ಕೆ ವಿಆರ್ಎಲ್ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗು ವಿಆರ್ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.