ಭಾರತಕ್ಕೆ ಸಿಂಧೂರ 'ತಿಲಕ': ಆಪತ್ಬಾಂಧವ ಹೊಡೆದ ಸಿಕ್ಸ್​ಗೆ ಟೇಬಲ್​ ಬಡಿದ ಗೌತಿ; ವಿಡಿಯೋ ವೈರಲ್​ | Gautam Gambhir

ವಿಜಯವಾಣಿ (1)
Published on

Gautam Gambhir: ನಿನ್ನೆ (ಸೆ.28) ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಹಣಾಹಣಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು. ಸತತ ಮೂರನೇ ಬಾರಿಗೆ ಪಾಕಿಸ್ತಾನವನ್ನು ಬಗ್ಗುಬಡಿದ ಸೂರ್ಯಕುಮಾರ್ ಯಾದವ್ ಪಡೆ, ಈ ಮೂಲಕ ಏಷ್ಯಾಕಪ್ 2025 ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಕುತೂಹಲ ಕೆರಳಿಸುವ ಹಂತಕ್ಕೆ ತಲುಪಿದ್ದ ಪಂದ್ಯದಲ್ಲಿ ತಂಡಕ್ಕೆ ಗೆಲುವಿನ ಸಿಂಧೂರ 'ತಿಲಕ' ಇಟ್ಟಿದ್ದು ಆಪತ್ಬಾಂಧವ ತಿಲಕ್​ ವರ್ಮಾ.

ಕೊನೆಯವರೆಗೂ ತಲುಪಿದ ಫೈನಲ್ ಪಂದ್ಯ ರೋಚಕತೆಗೆ ಸಾಕ್ಷಿಯಾಯಿತು. ಪಾಕ್​ ಕೊಟ್ಟ 147 ರನ್​ಗಳ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಸ್ಫೋಟಕ ಬ್ಯಾಟರ್​ಗಳಾದ ಅಭಿಷೇಕ್ ಶರ್ಮ ಮತ್ತು ಶುಭಮನ್ ಗಿಲ್​ ವಿಕೆಟ್​ಗಳು ಭಾರೀ ಆಘಾತವನ್ನು ತಂದೊಡ್ಡಿತು. ಇದು ತಂಡವನ್ನು ಆರಂಭಿಕ ಹಂತದಲ್ಲೇ ತೀವ್ರ ಸಂಕಷ್ಟಕ್ಕೆ ಸಿಲುಕಿಸಿತು. ಅಭಿಷೇಕ್​, ಗಿಲ್​ ಮತ್ತು ಸೂರ್ಯಕುಮಾರ್ ಯಾದವ್​ ಶೀಘ್ರವೇ ಪೆವಿಲಿಯನ್​ ಸೇರಿದ್ದು, ಗೆಲುವಿನ ಭರವಸೆ ಕಳೆದುಕೊಳ್ಳುವಂತೆ ಮಾಡಿತು. ಆದರೆ, ಕ್ರೀಸ್​ಗೆ ಅಂಟಿ ನಿಂತ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ, ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ತಂಡವನ್ನು ಸೋಲಿನಿಂದ ಗೆಲುವಿನತ್ತ ಕೊಂಡೊಯ್ದಿದ್ದು ರೋಚಕ.

ಈ ಕ್ಷಣಕ್ಕೆ ಟೀಮ್ ಇಂಡಿಯಾದ ಹೆಡ್​ ಕೋಚ್ ಗೌತಮ್ ಗಂಭೀರ್ ಕೂಡ ಸಾಕ್ಷಿ. ಕ್ರಿಕೆಟ್​ ಅಭಿಮಾನಿಗಳಂತೆ ತೀವ್ರ ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದ ಗಂಭೀರ್​, ಕೊನೆಯ ಓವರ್‌ನಲ್ಲಿ ಟೀಮ್ ಇಂಡಿಯಾ ಗೆಲುವಿಗೆ 10 ರನ್‌ಗಳ ಅಗತ್ಯವಿತ್ತು. ಹ್ಯಾರಿಸ್ ರೌಫ್ ಎಸೆದ ಕೊನೆಯ ಓವರ್‌ನ ಮೊದಲ ಎಸೆತದಲ್ಲಿ 2 ರನ್‌ಗಳು ಬಂದವು. ರೌಫ್ ಎಸೆದ ಎರಡನೇ ಬಾಲ್​ಗೆ ತಿಲಕ್ ವರ್ಮಾ ಭರ್ಜರಿ ಸಿಕ್ಸರ್ ಬಾರಿಸಿದರು. ಇದನ್ನು ನೋಡ್ತಿದ್ದಂತೆ ಕುಳಿತ ಜಾಗದಲ್ಲೇ ತಮ್ಮ ಮುಂದಿದ್ದ ಟೇಬಲ್​ ಬಡಿದ ಗಂಭೀರ್​, ತಮ್ಮ ಭಾವನೆಗಳನ್ನು ಹೊರಹಾಕಿದ್ದು ದೃಶ್ಯಗಳಲ್ಲಿ ಸೆರೆಯಾಗಿದೆ. ಈ ವಿಡಿಯೋ ತುಣಕು ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.

ಪಂದ್ಯದ ವಿವರ

ಟಾಸ್​ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, 19.1 ಓವರ್‌ಗಳಲ್ಲಿ 146 ರನ್‌ಗೆ ಆಲೌಟ್ ಆಯಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾಗೆ ಆರಂಭದಲ್ಲೇ ಸರಣಿ ಹಿನ್ನಡೆ ಎದುರಾಯಿತು. ಆದಾಗ್ಯೂ, ತಿಲಕ್ ವರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಸಂಜು ಸ್ಯಾಮ್ಸನ್, ದುಬೆ ರನ್​ಗಳ​ ಕೊಡುಗೆ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net