

ಬೆಂಗಳೂರು: ಚಂದನವನದ ಲವ್ಬರ್ಡ್ಸ್ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇದೇ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗುವುದಕ್ಕೆ ಸಜ್ಜಾಗಿದ್ದಾರೆ. ಎಲ್ಲ ಸರಿ, ಇವರಿಬ್ಬ ಪ್ರೇಮ್ ಕಹಾನಿ ಎಷ್ಟು ದಿನಗಳಿಂದ ನಡೆಯುತ್ತಿದೆ ಮತ್ತು ಇವರಿಬ್ಬರಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು? ಎಂಬ ಪ್ರಶ್ನೆ ಬರುವುದು ಸಹಜ.
ಈ ಪ್ರಶ್ನೆಯನ್ನು ಈ ಜೋಡಿಯ ಮುಂದಿಟ್ಟರೆ, ಒಂದು ಫ್ಲಾಶ್ಬ್ಯಾಕ್ ಹೊರಬೀಳುತ್ತದೆ. ವಸಿಷ್ಠ ಅವರೇ ಹೇಳಿಕೊಂಡಂತೆ, 2016ರಿಂದಲೂ ಅವರು ಮತ್ತು ಹರಿಪ್ರಿಯಾ ಒಳ್ಳೆಯ ಸ್ನೇಹಿತರಂತೆ. ಅದಕ್ಕೂ ಹೆಚ್ಚಾಗಿ, ವಸಿಷ್ಠ ಹರಿಪ್ರಿಯಾ ಅವರ ಅಭಿಮಾನಿಯಂತೆ. ಈ ಕುರಿತು ಮಾತನಾಡುವ ಅವರು, 'ನಟನಾಗಿ ನೋಡಿದರೆ, ಅವರು ನನಗಿಂತ ಸೀನಿಯರ್. 'ನನ್ನ ಗೋಧಿಬಣ್ಣ ಸಾಧಾರಣ ಮಥಕಟ್ಟು' ಚಿತ್ರ ನೋಡಿ ಇಷ್ಟಪಟ್ಟು ಅವರಾಗಿಯೇ ಬಂದು ಮಾತಾಡಿಸಿದ್ದರು. ಒಬ್ಬ ಸೀನಿಯರ್ ಯಾಗಿ ಬಂದು ವಿಶ್ ಮಾಡಿದ ಅವರ ಗುಣ ನನಗೆ ಬಹಳ ಇಷ್ಟವಾಯಿತು. ಅಲ್ಲಿಂದ ನಮ್ಮಿಬ್ಬರ ನಡುವೆ ಸ್ನೇಹ ಶುರುವಾಯಿತು. ಫೋನ್ನಲ್ಲಿ ಮಾತುಕತೆ ಶುರುವಾಯಿತು' ಎನ್ನುತ್ತಾರೆ ವಸಿಷ್ಠ.
ಅವರಿಬ್ಬರ ಪ್ರೀತಿಗೆ ಕೋವಿಡ್ ಲಾಕ್ಡೌನ್ ಸಹ ಕಾರಣವಾಯಿತಂತೆ. 'ಲಾಕ್ಡೌನ್ನಲ್ಲಿ ಫ್ರೀ ಇದ್ದಾಗ ಮಾತಾಡುವುದಕ್ಕೆ ಸಾಕಷ್ಟು ಸಮಯ ಸಿಗುತ್ತಿತ್ತು. ಅವರ ನಡವಳಿಕೆ, ಅವರ ಪ್ರತಿಭೆಯಿಂದ ಬಹಳ ಇಂಪ್ರೆಸ್ ಆದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ, ಧೈರ್ಯ ತುಂಬಿ ಕರೆದುಕೊಂಡು ಬಂದಿದ್ದೇ ಅವರು. ನಮ್ಮ ಸ್ನೇಹ, ಪ್ರೀತಿಯಾಯಿತು. ಅದನ್ನು ಹೇಳುವುದು ಹೇಗೆ ಎಂದು ಪರದಾಡುತ್ತಿದ್ದವು. ಕೊನೆಗೊಂದು ದಿನ ನಾವು ಪ್ರೇಮ ನಿವೇದನೆ ಮಾಡಿಕೊಂಡೆವು' ಎನ್ನುತ್ತಾರೆ ವಸಿಷ್ಠ.
ಎಲ್ಲ ಸರಿ, ಇಬ್ಬರ ನಡುವೆ ಮೊದಲು ಪ್ರಪೋಸ್ ಮಾಡಿದ್ದು ಯಾರು? ಎಂದರೆ, ತಾನು ಎಂದು ಕೈ ಎತ್ತುತ್ತಾರೆ ಸಿಂಹ. ಈ ಕುರಿತು ವಿವರಣೆ ನೀಡುವ ಹರಿಪ್ರಿಯಾ, 'ನನಗೂ ಹೇಳಿಕೊಳ್ಳಬೇಕು ಅಂತ ಇತ್ತು. ಅಷ್ಟರಲ್ಲಿ ಅಪ್ಪನ ನಿಧನದ ದಿನದಂದು ಸಿಂಹ ಪ್ರಪೋಸ್ ಮಾಡಿದರು. ನಾನು ಒಪ್ಪಿಕೊಂಡೆ. ಯಾರಿಗೂ ಗೊತ್ತಾಗದೆ ಹಾಗೆ ಕಷ್ಟಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡೂವರೆ, ಮೂರು ವರ್ಷ ಆಗಿದೆ. ವಸಿಷ್ಠ ಬಂದ ಮೇಲೆ ಬದುಕು ಸಾಕಷ್ಟು ಬದಲಾಗಿದೆ' ಎನ್ನುತ್ತಾರೆ ಹರಿಪ್ರಿಯಾ.