

ಬೆಂಗಳೂರು: ಕೆಲವರು ಪ್ರೀತಿಗೋಸ್ಕರ ಪ್ರಾಣವನ್ನು ಕೊಡುತ್ತಾರೆ. ಇನ್ನೂ ಕೆಲವರು ಪ್ರಾಣವನ್ನೇ ತೆಗೆಯುತ್ತಾರೆ. ಇಲ್ಲಿ ನಾಯಕನ ಎದುರು ಎರಡು ಆಪ್ಶನ್ಗಳಿರುತ್ತವೆ. ಇವೆರಡರಲ್ಲಿ ಅವನು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ? ಪ್ರಾಣ ಕೊಡುತ್ತಾನಾ? ಅಥವಾ ಪ್ರಾಣ ತೆಗೆಯುತ್ತಾನಾ?
ಇದು 'ಮಂಡ್ಯ ಹೈದ' ಎಂಬ ಚಿತ್ರದ ಒನ್ಲೈನ್ ಸ್ಟೋರಿ. ಕಳೆದ ವರ್ಷ 'ಮನಸಾಗಿದೆ' ಎಂಬ ಚಿತ್ರ ಬಂದಿದ್ದು ನೆನಪಿರಬಹುದು. ಅಭಯ್ ಎಂಬ ಹೊಸ ಹುಡುಗ ನಾಯಕನಾಗಿ ಎಂಟ್ರಿ ಕೊಟ್ಟ ಚಿತ್ರ ಇದು. ಈ ಚಿತ್ರವನ್ನು ನಾಯಕನ ತಂದೆ ಚಂದ್ರಶೇಖರ್ ನಿರ್ಮಿಸಿದ್ದರು. ಚಿತ್ರ ಅಷ್ಟೇನೂ ಸುದ್ದಿಯಾಗಲಿಲ್ಲ. ಈಗ ಚಂದ್ರಶೇಖರ್ ತಮ್ಮ ಮಗನಿಗಾಗಿ ಇನ್ನೊಂದು ಚಿತ್ರ ನಿರ್ಮಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಅದೇ 'ಮಂಡ್ಯ ಹೈದ'. ಇತ್ತೀಚೆಗೆ ಈ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.
'ಮಂಡ್ಯ ಹೈದ' ಚಿತ್ರವನ್ನು ವಿ. ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳ ೧೮ರಂದು ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬಂಡೆ ಮಾಂಕಾಳಮ್ಮ ದೇವಸ್ಥಾನದಲ್ಲಿ ನಡೆಯಲಿದೆ. ಈ ಚಿತ್ರದ ಕುರಿತು ಮಾತನಾಡುವ ಅವರು, 'ಈ ಚಿತ್ರದ ಮೂಲಕ ಮಂಡ್ಯದ ಹೈದನೊಬ್ಬನ ಲವ್ ಯಾವ ತರಹ ಇರುತ್ತದೆ ಎಂದು ಹೇಳುವುದಕ್ಕೆ ಹೊರಟಿದ್ದೇವೆ. ಈ ಚಿತ್ರದ ಶೇ.೮೦ ರಷ್ಟು ಚಿತ್ರೀಕರಣವನ್ನು ಮಂಡ್ಯ ಹಾಗೂ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಉಳಿದ ೨೦ ಭಾಗವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುತ್ತಿದ್ದೇವೆ' ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ ಶ್ರೀಕಾಂತ್.
ಇದನ್ನೂ ಓದಿ: ‘ಮೊದಲ ಮಳೆ’ ಸುರಿಸಲು ಹೊರಟ ನಾಯಕನಿಗೆ 9 ನಾಯಕಿಯರು!
'ಮಂಡ್ಯ ಹೈದ' ಚಿತ್ರದಲ್ಲಿ ಅಭಯ್ಗೆ ನಾಯಕಿಯಾಗಿ ಭೂಮಿಕಾ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ೫ ಹಾಡುಗಳಿದ್ದು, ಸುರೇಂದ್ರನಾಥ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.