

ಬೆಂಗಳೂರು: 'ಉತ್ತರಖಾಂಡ' ಎಂಬ ಚಿತ್ರದಲ್ಲಿ ಧನಂಜಯ್ ನಟಿಸುತ್ತಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆಯೇ ಘೋಷಣೆಯಾಗಿತ್ತು. ಧನಂಜಯ್ ಹುಟ್ಟುಹಬ್ಬದಂದು ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಆದರೆ, ಚಿತ್ರ ಯಾವಾಗಿನಿಂದ ಪ್ರಾರಂಭ ಎಂಬ ಮಾಹಿತಿ ಇರಲಿಲ್ಲ.
ಈಗ 'ಉತ್ತರಕಾಂಡ'ದ ಮುಹೂರ್ತ ದಿನಾಂಕ ಕೊನೆಗೂ ಹೊರಬಿದ್ದಿದ್ದು, ನವೆಂಬರ್ ಆರರಂದು ಚಿತ್ರ ಲಾಂಚ್ ಆಗಲಿದೆ. ಹಾಗಂತ ತಕ್ಷಣವೇ ಚಿತ್ರೀಕರಣ ಶುರು ಎಂದುಕೊಳ್ಳಬೇಡಿ. ಅದಕ್ಕಿನ್ನೂ ಸಮಯವಿದೆ. ಏಕೆಂದರೆ, ಮೊದಲು ಧನಂಜಯ್, 'ಹೊಯ್ಸಳ' ಚಿತ್ರವನ್ನು ಮುಗಿಸಬೇಕಿದೆ. ಮೊದಲು ಆ ಚಿತ್ರದ ಚಿತ್ರೀಕರಣ ಮುಗಿದು, ಮುಂದಿನ ವರ್ಷದಿಂದ 'ಉತ್ತರಕಾಂಡ' ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
ವಿಜಯ್ ಕಿರಗಂದೂರು ಅರ್ಪಿಸುತ್ತಿರುವ 'ಉತ್ತರಕಾಂಡ' ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ ಸಂಸ್ಥೆಯಡಿ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಜತೆಯಾಗಿ ನಿರ್ಮಿಸುತ್ತಿದ್ದಾರೆ. ಇನ್ನು, ರೋಹಿತ್ ಪದಕಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಂಚೆ ಧನಂಜಯ್ ಅಭಿನಯದಲ್ಲಿ ರೋಹಿತ್, 'ರತ್ನನ್ ಪ್ರಪಂಚ' ನಿರ್ದೇಶಿಸಿದ್ದರು. ಆ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯೇ ನಿರ್ಮಿಸಿತ್ತು. ಈಗ ಈ ಮೂವರು ಜತೆಗೆ ಕೆಲಸ ಮಾಡುತ್ತಿರುವ ಎರಡನೇ ಚಿತ್ರ ಇದಾಗಿದೆ.
ಮನುಷ್ಯನ ಮನಸ್ಸಿನ ಒಳಗಿನ ಖೇದಗಳನ್ನು, ಗೊಂದಲಗಳನ್ನು, ತಳಮಳಗಳನ್ನು ಕಥೆಯ ರೂಪದಲ್ಲಿ ರೋಹಿತ್ ಹೆಣೆದಿದ್ದು, ಚಿತ್ರವನ್ನು ಉತ್ತರ ಕರ್ನಾಟಕದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗುತ್ತದೆ.
ಧನಂಜಯ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದು, ಸ್ವಾಮಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.