

ಬೆಂಗಳೂರು: ಉಪೇಂದ್ರ ಅವರಿಗೆ ನಟನೆ, ನಿರ್ದೇಶನದಷ್ಟೇ ಹಾಡುಗಾರಿಕೆ ಸಹ ಬಹಳ ಸಲೀಸು. ಸಮಯ ಸಿಕ್ಕಾಗಲೆಲ್ಲ ತಮ್ಮ ಸಿನಿಮಾಗಳಿಗೆ, ಬೇರೆ ಸಿನಿಮಾಗಳ ಹಾಡಿಗೆ ಅವರು ಧ್ವನಿಯಾಗುತ್ತಿರುತ್ತಾರೆ. ಆದರೆ, ಇತ್ತೀಚಿನ ಕೆಲ ವರ್ಷ ಅವರು ಮೈಕ್ ಹಿಡಿದಿದ್ದು ಕಾಣಿಸಿಲ್ಲ. ಇದೀಗ ಮತ್ತೆ ಮೈಕ್ ಮುಂದೆ ಬಂದು ನಿಂತಿರುವ ಅವರು, ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಚಿತ್ರದ ಗೀತೆಗೆ ಧ್ವನಿಯಾಗಿದ್ದಾರೆ. ಈವರೆಗೂ 20ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಉಪೇಂದ್ರ, 2019ರಲ್ಲಿ ತೆರೆಗೆ ಬಂದ ‘ಐ ಲವ್ ಯೂ’ ಚಿತ್ರದಲ್ಲಿ ಹಾಡಿದ್ದನ್ನು ಬಿಟ್ಟರೆ ಇದೀಗ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಮೂಲಕ ಮತ್ತೆ ಆಗಮಿಸಿದ್ದಾರೆ.
ರತ್ನ ತೀರ್ಥ ನಿರ್ದೇಶನದ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಸಿನಿಮಾಗೆ ರಘುಶಾಸ್ತ್ರಿ ಸಾಹಿತ್ಯ ಬರೆದ ‘ಗೀಚು ನಿಂಗೆ ...’ ಹಾಡಿಗೆ ಕಂಠಸಿರಿ ಒದಗಿಸಿದ್ದಾರೆ. ವಿಜಯ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಜನನಿ ಫಿಲಂಸ್ ಲಾಂಛನದಡಿಯಲ್ಲಿ ಬಿ.ಜೆ. ಪ್ರಶಾಂತ್ ನಿರ್ವಿುಸುತ್ತಿರುವ ಈ ಚಿತ್ರದ ಬಹುತೇಕ ಕೆಲಸ ಮುಗಿದಿದ್ದು, ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿಯಿದೆ. ಶೌರ್ಯ, ರುಷಿಕಾ ರಾಜ್, ಶಂಕರ್ ಅಶ್ವತ್ಥ್, ರಘು ರಾಮನಕೊಪ್ಪ, ವಿಜಯ್ ಚೆಂಡೂರ್, ಸುಮಂತ, ಧನು, ಕುರಿಬಾಂಡ್ ರಂಗಸ್ವಾಮಿ ಸೇರಿ ಹಲವರಿದ್ದಾರೆ.