

ಬೆಂಗಳೂರು: ಇತ್ತೀಚೆಗೆ ಕೋರಮಂಗಲದಲ್ಲಿ ನಡೆದಿದ್ದ ಆಡಿ ಕ್ಯೂ-3 ಕಾರಿನ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ ಏಳು ಮಂದಿಯೂ ಅಪಘಾತಕ್ಕೂ ಮುನ್ನ ಕೋರಮಂಗಲದ ಸುತ್ತಮುತ್ತ ಪ್ರದೇಶ ಹಾಗೂ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲಿ ರೈಡ್ ಮಾಡಿರುವುದು ಮೊಬೈಲ್ಫೋನ್ ನೆಟ್ವರ್ಕ್ ಪರಿಶೀಲಿಸಿದಾಗ ಗೊತ್ತಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬುದರ ಬೆನ್ನತ್ತಿ ಹೊರಟಿದ್ದರು. ಅಪಘಾತವಾದ ಸ್ಥಳದಲ್ಲಿ ಮೃತಪಟ್ಟವರ ಬಳಿ ಇದ್ದ 3 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಮೊಬೈಲ್ ನೆಟ್ವರ್ಕ್ ಟ್ರೇಸ್ ಮಾಡಿ ಕಾರಿನಲ್ಲಿದ್ದ ಏಳು ಮಂದಿ ಎಲ್ಲೆಲ್ಲಿ ಹೋಗಿದ್ದರು? ಎಂಬುದನ್ನು ಪರಿಶೀಲಿಸಿದಾಗ ಅಪಘಾತಕ್ಕೂ ಮುನ್ನ ಕೋರಮಂಗಲದ ಸುತ್ತಮುತ್ತ ಪ್ರದೇಶ ಹಾಗೂ ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಲಿ ರೈಡ್ ಮಾಡಿರುವ ಸುಳಿವು ಸಿಕ್ಕಿದೆ ಎನ್ನಲಾಗಿದೆ.
ಆ.31ರಂದು ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ತಮಿಳುನಾಡಿನ ಹೊಸೂರು ಕ್ಷೇತ್ರದ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾ ಸಾಗರ್ (25), ಈತ ಮದುವೆ ಆಗಬೇಕಿದ್ದ ಮುರುಗೇಶ್ ಪಾಳ್ಯದ ಯುವತಿ ಬಿಂದು (28) ಸೇರಿ 7 ಮಂದಿ ಮೃತಪಟ್ಟಿದ್ದರು.