

ಬೆಂಗಳೂರು: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಅಣ್ಣನ ಮಗಳು ಕೃಷ್ಣಾ ಭಟ್, ಎರಡು ವರ್ಷಗಳ ಹಿಂದೆ ಬಿಡುಗಡೆಯಾದ ‘ಸವರ್ಣ ದೀರ್ಘ ಸಂಧಿ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ನೆನಪಿರಬಹುದು. ಆ ಚಿತ್ರದ ನಂತರ ಕೃಷ್ಣಾ ಇದೀಗ, ಇನ್ನೊಂದು ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಅದೇ ‘ಪ್ರಾಯಶಃ’. ‘ಪ್ರಾಯಶಃ’ ಒಂದು ಮರ್ಡರ್ ಮಿಸ್ಟ್ರಿ ಚಿತ್ರ. ರಂಜಿತ್ ರಾವ್ ಈ ಚಿತ್ರವನ್ನು ಬರೆದು ನಿರ್ದೇಶಿಸುವುದರ ಜತೆಗೆ, ‘ಅರ್ಹ ಕ್ರಿಯೇಷನ್ಸ್’ ಸಂಸ್ಥೆಯಡಿ ನಿರ್ವಣವನ್ನೂ ಮಾಡುತ್ತಿದ್ದಾರೆ.
ಈ ಚಿತ್ರದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು. ‘ನಾವು ಏನು ನೋಡುತ್ತೇವೋ? ಅದು ಆ ಕ್ಷಣದ ಸತ್ಯ ಮಾತ್ರ. ಈ ವಿಷಯವನ್ನಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಇಲ್ಲೊಂದು ಕೊಲೆಯಾಗುತ್ತದೆ. ಅದರ ಸುತ್ತ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕಥೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರ’ ಎನ್ನುತ್ತಾರೆ ರಂಜಿತ್. ಚಿತ್ರದ ಹೈಲೈಟ್ ಎಂದರೆ, ಶೈನ್ ಶೆಟ್ಟಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು. ಇಲ್ಲಿ ಅವರು ಚಿತ್ರನಿರ್ದೇಶಕನ ಪಾತ್ರ ಮಾಡಿದ್ದು, ಈ ಕಥೆಯ ನಿರೂಪಣೆ ಮಾಡುತ್ತಾರಂತೆ.
‘ಬಿಗ್ ಬಾಸ್’ ನಂತರ ಶೈನ್ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಅದು ಈ ಚಿತ್ರದ ಮೂಲಕ ನಿಜವಾಗಿದೆ. ಕೃಷ್ಣಾ ಮತ್ತು ಶೈನ್ ಜತೆಗೆ, ರಾಹುಲ್, ಮಧು ಹೆಗಡೆ, ಸುನೀಲ್ ಸಾಗರ್ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ವಿಜಯ್ ಕೃಷ್ಣ ಅವರ ಸಂಗೀತ ಮತ್ತು ಪ್ರಶಾಂತ್ ಪಾಟೀಲ್ ಛಾಯಾಗ್ರಹಣವಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಚಿತ್ರದ ಸೆನ್ಸಾರ್ ಆಗಲಿದೆ.