ಚಿಕ್ಕಣ್ಣ ಜತೆ ಮದುವೆ ಆಗಿಲ್ಲ ... ಸ್ಪಷ್ಟನೆ ನೀಡಿದ ತ್ರಿವೇಣಿ

Triveni - Final
Published on

'ಟಗರು' ಚಿತ್ರದಲ್ಲಿನ ಕಾನ್​ಸ್ಟೇಬಲ್​ ಸರೋಜ ಅವರ ಪಾತ್ರದ ಮೂಲಕ ಜನಪ್ರಿಯರಾದ ತ್ರಿವೇಣಿ, ಆ ನಂತರ ಉಪೇಂದ್ರ ಅಭಿನಯದ 'ಐ ಲವ್​ ಯೂ' ಸೇರಿದಂತೆ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ ಕನ್ನಡ ಚಿತ್ರರಂಗದಲ್ಲಿ ಕಾನ್​ಸ್ಟೇಬಲ್​ ಸರೋಜ ಎಂದೇ ತ್ರಿವೇಣಿ ಜನಪ್ರಿಯರಾಗಿದ್ದಾರೆ. ಈಗ ತ್ರಿವೇಣಿ, ನಟ ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ಶುಭ ಕೋರುವ ಮೂಲಕ ಅವಾಂತಕ್ಕೆ ಸಿಲುಕಿದ್ದಾರೆ.

ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ತ್ರಿವೇಣಿ ಅವರು ಸೋಷಿಯಲ್​ ಮೀಡಿಯಾ ಮೂಲಕ ಚಿಕ್ಕಣ್ಣ ಅವರಿಗೆ ಶುಭ ಕೋರುವುದರ ಜತೆಗೆ, ಅವರರ ಜತೆಗಿರುವ ಒಂದು ಫೋಟೋ ಶೇರ್​ ಮಾಡಿದ್ದರು. ಈ ಫೋಟೋದಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ಇಬ್ಬರೂ ಮದುವೆ ಪೋಷಾಕಿನಲ್ಲಿದ್ದುದರಿಂದ, ಅವರಿಬ್ಬರು ಮದುವೆಯಾಗಿರುಬಹುದು ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಶುರುವಾಯಿತು.

ಯಾವಾಗ ಇಂಥದ್ದೊಂದು ವದಂತಿ ಕೇಳಿ ಬಂತೋ, ಜಾಗೃತರಾದ ತ್ರಿವೇಣಿ, ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ತಾವು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ, ಅವೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತಾವು ಮದುವೆಯಾಗುವುದಿದ್ದರೆ ಎಲ್ಲರಿಗೂ ಅಧಿಕೃತವಾಗಿ ಹೇಳಿಯೇ ಮದುವೆಯಾಗುತ್ತೇನೆ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಇತ್ತೀಚೆಗೆ ಚಿಕ್ಕಣ್ಣ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ ಒಂದು ಪೋಸ್ಟ್​ ಹಾಕಿದ್ದೆ. ಹಾಗೆಯೇ ಅವರ ಜತೆಗಿರುವ ಒಂದು ಫೋಟೋ ಶೇರ್​ ಮಾಡಿದ್ದೆ. ಇದು ಚಿತ್ರಕ್ಕಾಗಿ ತೆಗೆದ ಒಂದು ಫೋಟೋ. ಈ ಫೋಟೋ ನೋಡಿ, ನಾವಿಬ್ಬರು ಮದುವೆಯಾಗಿದ್ದೇವೆ ಎಂಬ ವದಂತಿ ಹರಡಿದೆ. ಅದೆಲ್ಲಾ ಸುಳ್ಳು. ನಾನು ಮದುವೆಯಾಗಿಲ್ಲ. ನಾನು ಮದುವೆಯಾಗುವುದಿದ್ದರೆ, ಅಧಿಕೃತವಾಗಿ ಎಲ್ಲರಿಗೂ ಹೇಳಿಯೇ ಮದುವೆಯಾಗುತ್ತೇನೆ' ಎಂದು ಅವರು ಹೇಳಿದ್ದಾರೆ.

ಈಗ ತ್ರಿವೇಣಿ ಅವರೇ ಖುದ್ದಾಗಿ ಬಂದು ತಾವು ಚಿಕ್ಕಣ್ಣ ಅವರನ್ನು ಮದುವೆಯಾಗಿಲ್ಲ ಎಂದು ಹೇಳಿರುವುದರಿಂದ, ಇನ್ನಾದರೂ ಈ ವಿವಾದ ತಣ್ಣಗಾಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net