ನಾಗ್ ಹೊಸ ಚಿತ್ರ ಘೋಷಣೆ; ‘ಕಾರ್ತಿಕೇಯ 2’ ಖ್ಯಾತಿಯ ಚಂದು ಮೊಂಡೇಟಿ ನಿರ್ದೇಶನ

ನಾಗಚೈತನ್ಯ
Published on

‘ಕಸ್ಟಡಿ’ ಚಿತ್ರದ ಬಳಿಕ ಟಾಲಿವುಡ್ ನಟ ನಾಗಚೈತನ್ಯ ಅಕ್ಕಿನೇನಿ ಹೊಸ ಚಿತ್ರ ಯಾವುದು ಎಂಬ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಅದಕ್ಕೆ ಉತ್ತರ ದೊರೆತಿದೆ. ನಾಗಚೈತನ್ಯ ನಟಿಸಲಿರುವ 23ನೇ ಸಿನಿಮಾ ಅನೌನ್ಸ್ ಆಗಿದೆ.

ಪ್ಯಾನ್ ಇಂಡಿಯಾ ‘ಕಾರ್ತಿಕೇಯ 2’ ಖ್ಯಾತಿಯ ಚಂದು ಮೊಂಡೇಟಿ ನಾಗಚೈತನ್ಯ ಹೊಸ ಚಿತ್ರ ನಿರ್ದೇಶಿಸಲಿದ್ದು, ಕೆಲವು ದಿನಗಳಲ್ಲೇ ಸಿನಿಮಾ ಸೆಟ್ಟೇರಲಿದೆ. ತಮ್ಮ ಪಾತ್ರದ ಸಿದ್ಧತೆಗಾಗಿ ನಾಗ್ ಇತ್ತೀಚೆಗಷ್ಟೆ ಆಂಧ್ರಪ್ರದೇಶದ ಶ್ರೀಕಾಕುಳಂಗೆ ಭೇಟಿ ನೀಡಿ ಮೀನುಗಾರರ ಜತೆ ಕೆಲ ಸಮಯ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಇದು ನೈಜ ಘಟನೆಯ ಕುರಿತ ಚಿತ್ರವಾಗಿದ್ದು, ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.

ಚಿತ್ರದ ಬಗ್ಗೆ ನಾಗಚೈತನ್ಯ, ‘ಚಂದು ಆರು ತಿಂಗಳ ಹಿಂದೆ ಕಥೆ ಹೇಳಿದ್ದರು. ನಾನು ತುಂಬ ಉತ್ಸುಕನಾಗಿದ್ದೇನೆ. ನೈಜ ಘಟನೆಗಳನ್ನು ಆಧರಿಸಿ ಎರಡು ವರ್ಷಗಳಿಂದ ಕಥೆ ಮಾಡಿಕೊಂಡಿದ್ದಾರೆ. ಸ್ಪೂರ್ತಿದಾಯಕ ಕಥೆ. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ತಿಳಿಯಲು ಶ್ರೀಕಾಕುಳಂಗೆ ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದರು. 2018ರಲ್ಲಿ ನಡೆದ ನೈಜ ಘಟನೆ ಆಧರಿಸಿದ ಈ ಕಥೆಯ ಪ್ರಿ-ಪ್ರೊಡಕ್ಷನ್ ಕೆಲಸಗಳು ಸದ್ಯ ಘಟನೆ ನಡೆದ ಸ್ಥಳವಾದ ಶ್ರೀಕಾಕುಳಂನಲ್ಲಿ ನಡೆಯುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net