

ಚೆನ್ನೈ: ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ.
ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಸದ್ಯ ಬಾಲಿವುಡ್ಗೂ ಕೀರ್ತಿ ಸುರೇಶ್ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್ ನಟನೆಯ ಬಾಬಿ ಜಾನ್ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ತಮಿಳು ಸಿನಿಮಾ ಥೇರಿ ರಿಮೇಕ್.
ವರುಣ್ ಧವನ್ ನಿನ್ನೆಯಷ್ಟೇ ತಮ್ಮ 37 ನೇ ಹುಟ್ಟುಹಬ್ಬವನ್ನು ಚಿತ್ರತಂಡದೊಂದಿಗೆ ಆಚರಿಸಿಕೊಂಡರು. ಈ ವೇಳೆ ಕೀರ್ತಿ ಸುರೇಶ್ ಧರಿಸಿದ್ದ ಉಡುಗೆ ಎಲ್ಲರ ಕಣ್ಣು ಕುಕ್ಕಿದೆ. ಕೆಂಪು ಬಣ್ಣದ ಧಿರಿಸಿನಲ್ಲಿ ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈವರೆಗೂ ಕೀರ್ತಿ ಅವರನ್ನು ಆ ಅವತಾರದಲ್ಲಿ ನೋಡಿರಲಿಲ್ಲ. ಇದಕ್ಕೆ ಸಂಬಂಧಿಸಿದ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಕೀರ್ತಿ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. ಎಲ್ಲವು ಬಾಲಿವುಡ್ ಮಹಿಮೆ! ಬಾಲಿವುಡ್ಗೆ ಕಾಲಿಟ್ಟ ಬೆನ್ನಲ್ಲೇ ಕೀರ್ತಿ ಎಷ್ಟೊಂದು ಬದಲಾಗಿದ್ದಾರೆ ನೋಡಿ. ಕೀರ್ತಿ ಅವರಿಂದ ನಾವು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. (ಏಜೆನ್ಸೀಸ್)