

ಮುಂಬೈ: ಬಾಲಿವುಡ್ನ ಮೂವರು ಅತ್ಯಂತ ಜನಪ್ರಿಯ ನಾಯಕನಟರೆಂದರೆ ಅದು ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್ ಮತ್ತು ಶಾರೂಖ್ ಖಾನ್. ಹಿಂದಿ ಚಿತ್ರರಂಗವನ್ನು ಮೂರು ವಿಭಿನ್ನ ಕಾಲಘಟ್ಟದಲ್ಲಿ ಆಳಿದ ಈ ಮೂವರು ಒಂದೇ ಚಿತ್ರದಲ್ಲಿ ನಟಿಸಬೇಕಾಗಿದ್ದ ವಿಷಯ ಗೊತ್ತಾ?
ಗೊತ್ತಿಲ್ಲದಿದ್ದರೆ ಕೇಳಿ, ಕೆಲವು ವರ್ಷಗಳ ಹಿಂದೆ, ಈ ಮೂವರನ್ನಿಟ್ಟುಕೊಂಡು ಒಂದು ದೊಡ್ಡ ಚಿತ್ರ ಮಾಡುವುದಕ್ಕೆ ಪ್ಲಾನ್ ಆಗಿತ್ತು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಪರೂಪದ ಚಿತ್ರವಾಗಿರುವುದರಿಂದ, ಮೂವರೂ ನಟಿಸುವುದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ, ಕಾರಣಾಂತರಗಳಿಂದ ಈ ಚಿತ್ರ ಶುರುವಾಗಲೇ ಇಲ್ಲ.
ಇಂಥದ್ದೊಂದು ಕನಸು ಕಂಡವರು ಹಿಂದಿಯ ಜನಪ್ರಿಯ ನಿರ್ದೇಶಕ ಸುಭಾಷ್ ಘಾಯ್. ಅವರು ಅದಕ್ಕೂ ಮುನ್ನ ದಿಲೀಪ್ ಕುಮಾರ್ ಮತ್ತು ಶಾರೂಖ್ ಖಾನ್ ಜತೆಗೆ ಕೆಲಸ ಮಾಡಿದ್ದರು. ಅಮಿತಾಭ್ ಬಚ್ಚನ್ ಅಭಿನಯದಲ್ಲಿ ಒಂದು ಚಿತ್ರ ಮಾಡುವುದಕ್ಕೆ ಪ್ರಯತ್ನಿಸಿದ್ದರಾದರೂ, ಅದು ಕಾರಣಾಂತರಗಳಿಂದ ಮುಂದುವರೆಯಲಿಲ್ಲ. ಯಾಕೆ ಈ ಮೂವರನ್ನೂ ಇಟ್ಟುಕೊಂಡು ಒಂದು ಚಿತ್ರ ಮಾಡಬಾರದು ಎಂಬ ಯೋಚನೆ ಹೊಳೆಯುತ್ತಿದ್ದಂತೆಯೇ, ಶುರುವಾಗಿದ್ದೇ 'ಮದರ್ಲ್ಯಾಂಡ್' ಎಂಬ ಚಿತ್ರ. ಈ ಚಿತ್ರದಲ್ಲಿ ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ಶಾರೂಖ್ ಖಾನ್ ಜತೆಗೆ ಐಶ್ವರ್ಯಾ ರೈ, ಮಹಿಮಾ ಚೌಧರಿ ಮತ್ತು ಪ್ರೀತಿ ಜಿಂಟಾ ಅವರನ್ನೂ ಆಯ್ಕೆ ಮಾಡಿದ್ದರು.
ಇದನ್ನೂ ಓದಿ: ಹರಿಪ್ರಿಯಾಗೆ ಹಾಲಿವುಡ್ ಪ್ರಶಸ್ತಿ
ಆದರೆ, ಈ ಚಿತ್ರ ಸೆಟ್ಟೇರಲೇ ಇಲ್ಲ. ಅದಕ್ಕೆ ಕಾರಣ ಯಾರು ಗೊತ್ತಾ? ಶಾರೂಖ್ ಖಾನ್. ಸುಭಾಷ್ ಘಾಯ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಈ ಚಿತ್ರ ನಿಲ್ಲುವುದಕ್ಕೆ ಕಾರಣ ಶಾರೂಖ್ ಖಾನ್ ಅಂತೆ. ಆರಂಭದಲ್ಲಿ ಚಿತ್ರದಲ್ಲಿ ನಟಿಸುವುದಕ್ಕೆ ಅವರು ಆಸಕ್ತಿ ತೋರಿಸಿದರೂ, ಮಲ್ಟಿಸ್ಟಾರರ್ ಚಿತ್ರಗಳಿಗಿಂಥ, ಸೋಲೋ ಹೀರೋ ಚಿತ್ರ ಮಾಡಬೇಕು ಎಂಬ ಕಾರಣಕ್ಕೆ ಹಿಂದೇಟು ಹಾಕಿದರಂತೆ. ಹಾಗೆ ನಿಂತ ಚಿತ್ರ ಖಾಯಮ್ಮಾಗಿ ನಿಂತು ಹೋಗಿದೆ ಎನ್ನುವುದು ಬೇಸರದ ಸಂಗತಿ.