

ಬೆಂಗಳೂರು: ವಿನಯ್ ರಾಜಕುಮಾರ್ ಇದೀಗ ಆ್ಯಕ್ಷನ್&ಕಟ್ ಹೇಳುವುದಕ್ಕೆ ಸಜ್ಜಾಗಿದ್ದಾರೆ. ನಟನೆ ಜತೆಗೆ ನಿರ್ದೇಶನಕ್ಕೂ ಇಳಿದರಾ ಅವರು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿನಯ್ ನಿರ್ದೇಶಕರಾಗುತ್ತಿರುವುದು ರಿಯಲ್ ಆಗಲ್ಲ, ರೀಲ್ನಲ್ಲಿ. ಕೀರ್ತಿ ಮೊದಲ ಬಾರಿಗೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ "ಅಂದೊಂದಿತ್ತು ಕಾಲ' ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ವಿನಯ್ ನಟಿಸುತ್ತಿದ್ದಾರೆ.
ಈಗಾಗಲೇ ಚಿತ್ರದ ಒಂದಷ್ಟು ಭಾಗದ ಶೂಟಿಂಗ್ ಸಹ ಮುಗಿದಿದ್ದು, ಜುಲೈ 15ರಿಂದ ಮೂರನೇ ಹಂತದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಬೆಂಗಳೂರು ಬಳಿಕ ತೀರ್ಥಹಳ್ಳಿ ಮತ್ತು ಊಟಿಯಲ್ಲಿ ಶೂಟಿಂಗ್ ನಡೆಯಲಿದ್ದು, ಕೇರಳದಲ್ಲಿಯೂ ದೃಶ್ಯಗಳನ್ನು ಸೆರೆಹಿಡಿಯಲಿದ್ದಾರೆ. ಈ ಮೊದಲೇ ಹೇಳಿದಂತೆ 1990ರ ಕಾಲಟ್ಟದಲ್ಲಿ ಈ ಸಿನಿಮಾ ಸಾಗಲಿದ್ದು, ಒಟ್ಟು ಮೂರು ರೀತಿಯ ಶೇಡ್ಗಳಲ್ಲಿ ವಿನಯ್ ಕಾಣಿಸಿಕೊಳ್ಳಲಿದ್ದಾರೆ. ವಿನಯ್ಗೆ ಅದಿತಿ ಪ್ರಭುದೇವ, ಕಿರುತೆರೆ ನಟಿ ನಿಶಾ ಜೋಡಿಯಾಗಿದ್ದಾರೆ. ಭುವನ್ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ರಾವೇಂದ್ರ ವಿ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡುತ್ತಿದ್ದಾರೆ.