

Amaran : ಕಾಲಿವುಡ್ ಸೂಪರ್ಸ್ಟಾರ್ ಶಿವಕಾರ್ತಿಕೇಯನ್ ಹಾಗೂ ಸರಳ ಸುಂದರಿ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದೆ. ಕಡಿಮೆ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಇಂದು 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ತಮಿಳು ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಈಗಲೂ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಅಂದಹಾಗೆ ಅಮರನ್ ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಯಿತು. ಇಂದಿಗೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 5ರಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರೂ ಕೂಡ ಥಿಯೇಟರ್ನಲ್ಲಿ 50 ದಿನ ಪೂರೈಸಲಿದೆ. ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಬಾಕ್ಸ್ಆಫೀಸ್ನಲ್ಲಿ ಸಖತ್ ಸದ್ದು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 44ನೇ ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ಗೆ ನಿಯೋಜನೆಗೊಂಡಾಗ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ವೇಳೆ ತಮ್ಮ ಶೌರ್ಯಕ್ಕಾಗಿ ಮರಣೋತ್ತರ ಅಶೋಕ ಚಕ್ರವನ್ನು ಪಡೆದ ಮೇಜರ್ ಮುಕುಂದ್ ವರದರಾಜನ್ ಅವರ ನೈಜ-ಜೀವನದ ಕಥೆ ಇದಾಗಿದೆ. ರಾಜ್ಕುಮಾರ್ ಪೆರಿಸ್ವಾಮಿ ನಿರ್ದೇಶಿಸಿದ್ದು, ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಸಂಸ್ಥೆ ಬಂಡವಾಳ ಹೂಡಿತು.
ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. 2024ರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿರುವ ಅಮರನ್ ಚಿತ್ರದಿಂದ ನಿರ್ಮಾಪಕರು ಗಳಿಸಿದ ಒಟ್ಟು ಕಲೆಕ್ಷನ್ ಮತ್ತು ಲಾಭದ ಬಗ್ಗೆ ಮಾಹಿತಿ ಬಿಡುಗಡೆಯಾಗಿದೆ.
ಅಮರನ್ ಚಿತ್ರದ ಬಜೆಟ್ 110 ಕೋಟಿ ರೂಪಾಯಿ. ಬಿಡುಗಡೆಗೂ ಮುನ್ನವೇ ಅಮರನ್ ಸಿನಿಮಾ 117 ಕೋಟಿ ರೂ. ಗಳಿಸಿತು. ಅಂದರೆ, ಬಿಡುಗಡೆಗೂ ಮುಂಚೆಯೇ ನಿರ್ಮಾಪಕರಿಗೆ 7 ಕೋಟಿ ರೂ. ಲಾಭ ಸಿಕ್ಕಿತು. ಇನ್ನು ಸಿನಿಮಾ ಬಿಡುಗಡೆ ಬಳಿಕ ವಿಶ್ವಾದ್ಯಂತ 361 ಕೋಟಿ ರೂ. ಗಳಿಸಿತು. ಇದು ಲೈಫ್ಟೈಮ್ ಕಲೆಕ್ಷನ್.
ಇನ್ನು ಈ ಸಿನಿಮಾದಿಂದ ರಾಜ್ಕಮಲ್ ಸಂಸ್ಥೆ ಗಳಿಸಿದ ಲಾಭ ಎಷ್ಟು ಎಂದು ನೋಡಿದರೆ, ಚಿತ್ರಮಂದಿರ ಹೊರಗಿನ ವ್ಯವಹಾರ 89 ಕೋಟಿ ರೂಪಾಯಿ. ಥಿಯೇಟರ್ ಬಿಜಿನೆಸ್ (ಪ್ರೀ ರಿಲೀಸ್) 28 ಕೋಟಿ ರೂಪಾಯಿ. ಥಿಯೇಟರ್ ಆದಾಯ (ಬಿಡುಗಡೆ ನಂತರ) 105 ಕೋಟಿ ರೂಪಾಯಿ. ಒಟ್ಟು 222.40 ಕೋಟಿ ರೂಪಾಯಿ ರಾಜ್ಕಮಲ್ ಕಂಪನಿಗೆ ಸಿಕ್ಕಿತು. ಚಿತ್ರದ ಬಜೆಟ್ 110 ಕೋಟಿ ರೂ. ಕಡಿತಗೊಳಿಸಿದರೆ, ರಾಜಕಮಲ್ ಕಂಪನಿ 112 ಕೋಟಿ ರೂ. ಲಾಭ ಗಳಿಸಿದೆ. ಈ ಮಾಹಿತಿಯನ್ನು ಖ್ಯಾತ ಪತ್ರಕರ್ತ ಬಿಸ್ಮಿ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)