ಲಾಕ್​ಡೌನ್​ನಿಂದ ಬಣ್ಣ ಕಳೆದುಕೊಂಡವರ ಕಥೆ ...

Painter - Final
Published on

ಹೀಗೇ ನಡೆದು ಬರುತ್ತಿದ್ದಾಗ, ಒಂದು ಮನೆಯ ಬಾಗಿಲು ತೆಗೆದಿರುವುದು ಕಾಣುತ್ತದೆ. ಸೀದಾ ಬಾಗಿಲ ಬಳಿ ಹೋಗುತ್ತಾನೆ. ಮನೆಯ ಹುಡುಗ ತನ್ನದೇ ಲೋಕದಲ್ಲಿ ಮಗ್ನನಾಗಿರುತ್ತಾನೆ. ಇವನು ಸೀದಾ ಎದುರಿಗಿರುವ ರೂಮ್​ಗೆ ಹೋಗಿ ಬಾಗಿಲು ಹಾಕಿಕೊಂಡು ಬಿಡುತ್ತಾನೆ. ಸ್ವಲ್ಪ ಹೊತ್ತಿನ ನಂತರ, ಮನೆಯವರಿಗೆ ಆ ರೂಮ್​ನಲ್ಲಿ ಯಾರೋ ಇರುವ ಗುಮಾನಿಯಾಗುತ್ತದೆ. ಆಗುಂತಕನ ಆಗಮನದಿಂದ ಅವರಿಗೆ ಭಯವಾಗುತ್ತದೆ. ಅವನು ತಮ್ಮ ಮೇಲೆ ಎರಗಬಾರದು ಅಥವಾ ತಪ್ಪಿಸಿಕೊಳ್ಳಬಾರದು ಎಂದು ಹೊರಗಿನಿಂದ ರೂಮ್​ನ ಬೀಗ ಹಾಕಿ ಬಿಡುತ್ತಾರೆ ...

ಅವರು ಬೀಗ ತೆಗೆಯುವವರೆಗೂ ಅವನೂ ಹೊರಬರುವಂತಿಲ್ಲ. ಇತ್ತ ಹೊರಗಿನವರೂ ನೆಮ್ಮದಿಯಾಗಿರುವಂತಿಲ್ಲ. ಸಹಾಯಕ್ಕೆ ಪೊಲೀಸರನ್ನು ಕರೆದರೆ, ಅವರಿಗೆ ಕರೊನಾ ಡ್ಯೂಟಿ. ಸಂಬಂಧಿಕರನ್ನು ಕರೆದರೆ ಲಾಕ್​ಡೌನ್​ನಿಂದ ಅವರು ಮೆನಯಿಂದ ಹೊರಬರುವಂತಿಲ್ಲ. ಸರಿ, ಮುಂದೇನು? ಉತ್ತರಕ್ಕಾಗಿ ನೀವು ಶ್ರೇಯಸ್ ಎಂಟರ್ಟೈನ್ಮೆಂಟ್ ATT (ಆಲ್​ಟೈಮ್ ಥಿಯೇಟರ್)ನಲ್ಲಿ ಬಿಡುಗಡೆಯಾಗಿರುವ 'ದಿ ಪೇಂಟರ್​' ಚಿತ್ರವನ್ನು ನೀವು ನೋಡಬೇಕು.

ಲಾಕ್​ಡೌನ್​ನಲ್ಲಿ ತಯಾರಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿತ್ರ 'ದಿ ಪೇಂಟರ್​', ಹೆಸರು ಕೇಳಿದರೆ ಇದೊಬ್ಬ ಪೇಂಟರ್​ನ ಕಥೆ ಎಂದನಿಸಿದರೂ, ಅದಲ್ಲ. ಇದು ಲಾಕ್​ಡೌನ್​ನ ಕಥೆ. ಕರೊನಾ ಹಾವಳಿ ತಗ್ಗಿಸುವುದಕ್ಕೆ ಇಡೀ ದೇಶದಲ್ಲಿ ಲಾಕ್​ಡೌನ್​ ಘೋಷಣೆಯಾದಾಗ ಏನೆಲ್ಲಾ ಆಯಿತು ಮತ್ತು ಏನೆಲ್ಲಾ ಆಗಿರಬಹುದು ಎಂದು ಹೇಳುವ ಕಥೆ ಇದು. ಒಬ್ಬ ಆಗುಂತಕನ ಆಗಮನದಿಂದ ಒಂದು ಕುಟುಂಬದಲ್ಲಿ ಏನೆಲ್ಲಾ ತಲ್ಲಣಗಳಾಗುತ್ತವೆ ಎಂದು ಸಾರುವ ಕಥೆ ಈ ಚಿತ್ರದಲ್ಲಿದೆ.

ಈ ಥ್ರಿಲ್ಲರ್​ ಕಥೆಯನ್ನು ಅಷ್ಟೇ ಥ್ರಿಲ್ಲಿಂಗ್ ಆಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ ವೆಂಕಟ್​ ಭಾರದ್ವಾಜ್. ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವುದಷ್ಟೇ ಅಲ್ಲ, ಚಿತ್ರದ ಪ್ರಮುಖ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರ ಟೇಕಾಫ್​ ಆಗುವುದಕ್ಕೆ ಒಂದಿಷ್ಟು ಸಮಯ ಬೇಕು. ಆ ನಂತರ ಚಿತ್ರ ಮುಗಿಯುವುದು ಗೊತ್ತಾಗುವುದೇ ಇಲ್ಲ. ಇನ್ನು ಚಿತ್ರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿವೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ, ವೆಂಕಟ್​ ಅವರ ಪ್ರಯತ್ನ ಮತ್ತು ಪ್ರಯೋಗ ಖುಷಿಕೊಡಬಹುದು.

ಇನ್ನು ಆ ಸಣ್ಣ-ಪುಟ್ಟ ಪಾತ್ರಗಳ ಬಗ್ಗೆ ಹೇಳುವುದಾದರೆ, ಇದು ಕೆಲವೇ ಪಾತ್ರಧಾರಿಗಳ ಸುತ್ತುವ ಚಿತ್ರ. ಲೊಕೇಶನ್​ಗಳು ಸಹ ಕಡಿಮೆಯೇ. ಅದರಲ್ಲೂ ಚಿತ್ರದ ಬಹಳಷ್ಟು ಭಾಗ ಒಂದೇ ಮನೆಯಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. ಲಾಕ್​ಡೌನ್​ ಸಂದರ್ಭದಲ್ಲಿ ಚಿತ್ರೀಕರಣವಾಗಿರುವುದರಿಂದ, ಭವ್ಯ ಪರಿಸರ, ಶ್ರೀಮಂತಿಕೆ ಯಾವುದನ್ನೂ ನೋಡುವುದಕ್ಕೆ ಸಾಧ್ಯವಿಲ್ಲ. ಇನ್ನು ಇರುವ ಪರಿಕರಗಳಲ್ಲೇ ಚಿತ್ರ ರೂಪಿಸಲಾಗಿದೆ. ಹಾಗೆಯೇ ಇಲ್ಲಿನ ಕಲಾವಿದರ್ಯಾರೂ ವೃತ್ತಿಪರರಲ್ಲ. ಒಟ್ಟಾರೆ, ನೈಜ ಪರಿಸರದಲ್ಲಿ, ಚಿತ್ರವನ್ನು ಸಾಧ್ಯವಾದಷ್ಟು ನೈಜವಾಗಿ ಹಿಡಿಯುವ ಪ್ರಯತ್ನ ಮಾಡಲಾಗಿದೆ.

ಕನ್ನಡದಲ್ಲಿ ಈಗಾಗಲೇ ಹಲವು ಪ್ರಯೋಗಗಳಾಗಿವೆ. ಆ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ 'ದಿ ಪೈಂಟರ್​'. ಚಿತ್ರಪ್ರದರ್ಶನ ರದ್ದಾಗಿರುವ ಈ ಸಮಯದಲ್ಲಿ, ಈ ಪ್ರಯೋಗವನ್ನು ಮನೆಯಲ್ಲೇ ಕೂತು ಸವಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net