ಮುಂದಿನ ಹಂತದ ಚಿತ್ರೀಕರಣದ ಸಿದ್ಧತೆಯಲ್ಲಿ ಟೀಮ್​ ಚಾರ್ಲಿ

777 Charlie - Final
Published on

ಬೆಂಗಳೂರು: ಕರೊನಾ ಮತ್ತು ಲಾಕ್​ಡೌನ್​ನಿಂದಾಗಿ 'ಚಾರ್ಲಿ 777' ಚಿತ್ರದ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ ಲಾಕ್​ಡೌನ್​ ಮುಗಿದು, ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾದರೂ ಚಿತ್ರತಂಡ ಇನ್ನೂ ಚಿತ್ರೀಕರಣ ಪ್ರಾರಂಭಿಸಿಲ್ಲ. ಈ ಕುರಿತು ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರತಂಡದವರು, ಸದ್ಯದಲ್ಲೇ ಶೂಟಿಂಗ್​ಗೆ ಹೊರಡಿಲಿದ್ದಾರೆ.

ಈ ವಿಷಯವಾಗಿ ನಿರ್ದೇಶಕ ಕಿರಣ್​ ರಾಜ್​ ಅವರು ಒಂದಿಷ್ಟು ಫೋಟೋಗಳನ್ನು ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. 'ಮುಂದಿನ ಹಂತದ ಚಿತ್ರೀಕರಣದ ಸಿದ್ಧತೆ ನಡೆಯುತ್ತಿದೆ. ದೊಡ್ಡ ಬ್ರೇಕ್​ನ ನಂತರ ಮತ್ತೆ ಚಿತ್ರೀಕರಣಕ್ಕೆ ವಾಪಸ್ಸಾಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

ಲಾಕ್​ಡೌನ್​ಗೂ ಮುನ್ನ '777 ಚಾರ್ಲಿ' ಚಿತ್ರತಂಡವು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡುತಿತ್ತು. ಇನ್ನು 20 ದಿನಗಳ ಕಾಲ ಸತತ ಚಿತ್ರೀಕರಣ ಮುಗಿದಿದ್ದರೆ ಕುಂಬಳಕಾಯಿ ಒಡೆಯಬಹುದಿತ್ತು. ಅಷ್ಟರಲ್ಲಿ ಲಾಕ್​ಡೌನ್​ ಘೋಷಣೆಯಾಗಿದ್ದರಿಂದ, ಚಿತ್ರತಂಡದವರು ಅರ್ಧಕ್ಕೇ ಚಿತ್ರೀಕರಣ ಮುಗಿಸಿ ಕರ್ನಾಟಕಕ್ಕೆ ವಾಪಸ್ಸಾದರು. ಈ ಮಧ್ಯೆ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದರೂ, ಚಿತ್ರೀಕರಣ ಮಾತ್ರ ಶುರುವಾಗಿರಲಿಲ್ಲ. ಇದೀಗ ಆ ಕುರಿತು ಪ್ಲಾನ್​ ಮಾಡುತ್ತಿರುವ ಚಿತ್ರತಂಡವು, ಸದ್ಯದಲ್ಲೇ ಹಿಮಾಚಲ ಪ್ರದೇಶಕ್ಕೆ ಹೋಗಿ ಬಾಕಿ ಇರುವ 20 ದಿನಗಳ ಚಿತ್ರೀಕರಣವನ್ನು ಮೊದಲು ಮುಗಿಸಿಬರಲಿದೆ.

'777 ಚಾರ್ಲಿ' ಚಿತ್ರವನ್ನು ಕಿರಣ್​ ರಾಜ್​ ನಿದೇಶಿಸುತ್ತಿದ್ದಾರೆ. ಚಿತ್ರದಲ್ಲಿ ರಕ್ಷಿತ್​, ಸಂಗೀತ ಶೃಂಗೇರಿ, ರಾಜ್​ ಬಿ ಶೆಟ್ಟಿ, ದಾನಿಶ್​ ಸೇಠ್​ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರವನ್ನು ರಕ್ಷಿತ್​ ಶೆಟ್ಟಿ ಮತ್ತು ಪುಷ್ಕರ್​ ಮಲ್ಲಿಕಾರ್ಜುನಯ್ಯ ಜತೆಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net