'ಗಿರ್ಕಿ' ಗೆದ್ದ ಖುಷಿಯಲ್ಲಿ ಇನ್ನೊಂದು ಚಿತ್ರ ಘೋಷಿಸಿದ ತರಂಗ ವಿಶ್ವ ...

Girki (2)
Published on

ಬೆಂಗಳೂರು: ಕಳೆದ ವಾರ ಬಿಡುಗಡೆಯಾದ ತರಂಗ ವಿಶ್ವ ಅಭಿನಯದ 'ಗಿರ್ಕಿ' ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿ ಅವರು ಇನ್ನೊಂದು ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರವು ಕೆಲವೇ ತಿಂಗಳುಗಳಲ್ಲಿ ಪ್ರಾರಂಭವಾಗಲಿದೆ.

'ಗಿರ್ಕಿ' ಚಿತ್ರವನ್ನು ವಾಸುಕಿ ಭುವನ್ ಜತೆಗೆ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ ವಿಶ್ವ. ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೂ ಅವರು ನಿರ್ವಹಿಸಿದ್ದಾರೆ. ಅವರ ಜತೆಗೆ ವಿಲೋಕ್​ ರಾಜ್​, ದಿವ್ಯಾ ಉರುಡುಗ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ವಿಶ್ವ, 'ನಟನಾಗಿದ್ದ ನಾನು, ಈ ಚಿತ್ರದಿಂದ ನಿರ್ಮಾಪಕನಾದೆ. ನಟನೆ ಕೂಡ ಮಾಡಿದ್ದೇನೆ. ಕಳೆದವಾರ ಚಿತ್ರ ತೆರೆ ಕಂಡಿದೆ. ನಮ್ಮ ಚಿತ್ರಕ್ಕೆ ರಾಜ್ಯಾದ್ಯಂತ ಸಿಗುತ್ತಿರುವ ಮೆಚ್ಚುಗೆಗೆ ಮನ ತುಂಬಿ ಬಂದಿದೆ. ಕನಕಪುರ ಸೇರಿ ಹಲವು ಕಡೆ ಭೇಟಿ ನೀಡಿದ್ದೇನೆ. ಜನ ಸಿನಿಮಾ ಬಗ್ಗೆ ಉತ್ತಮ ಮಾತುಗಳಾಡುತ್ತಿದ್ದಾರೆ. ಚಿತ್ರದ ಹಿಂದಿ ರೈಟ್ಸ್ ಕೂಡ ಮಾರಾಟವಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ನಾನು ಮತ್ತೊಂದು ಚಿತ್ರ ಸಹ ಆರಂಭಿಸಲಿದ್ದೇನೆ. ಚಿತ್ರದ ಗೆಲುವಿಗೆ ಕಾರಣರಾದ ನನ್ನ ಚಿತ್ರತಂಡಕ್ಕೆ ಹಾಗೂ ಕನ್ನಡ ಕಲಾರಸಿಕರಿಗೆ ನನ್ನ ಧನ್ಯವಾದ' ಎನ್ನುತ್ತಾರೆ.

ನಿರ್ದೇಶಕ ವೀರೇಶ್​, ಈ ಹಿಂದೆ ಸಹಾಯಕ ನಿರ್ದೇಶಕರಾಗಿದ್ದಾಗ, ಅವರು ಕೆಲಸ ಮಾಡಿದ ಚಿತ್ರಗಳು ಬಿಡುಗಡೆ ಆದಾಗ ಚಿತ್ರಮಂದಿರಗಳಿಗೆ ಭೇಟಿ ನೀಡುತ್ತಿದ್ದರಂತೆ. 'ನಾನು ಅಸೋಸಿಯೇಟ್ ಆಗಿದ್ದಾಗ ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದೆ. ಆಗ ಅಲ್ಲಿ ಜನರು ಆ ನಿರ್ದೇಶಕನ ಬಗ್ಗೆ ಆಡುತ್ತಿದ್ದ ಪ್ರಶಂಸೆಯ ಮಾತುಗಳನ್ನು ಕೇಳಿ ನನಗೂ‌ ನಿರ್ದೇಶಕನಾಗುವ ಅಸೆ ಹೆಚ್ಚುತ್ತಿತ್ತು. ಈಗ ನಾನು ಆ ಸಂತೋಷವನ್ನು ‌ಅನುಭವಿಸುತ್ತಿದ್ದೇನೆ. ನಮ್ಮ ಚಿತ್ರಕ್ಕೆ ಹೋದ ಕಡೆ ಎಲ್ಲಾ ಉತ್ತಮ ಪ್ರಶಂಸೆ ಸಿಗುತ್ತಿದೆ' ಎನ್ನುತ್ತಾರೆ ನಿರ್ದೇಶಕ ವೀರೇಶ್ ಪಿ.ಎಂ.

'ಗಿರ್ಕಿ' ಚಿತ್ರಕ್ಕೆ ವೀರ್​ ಸಮರ್ಥ್​ ಸಂಗೀತ ಸಂಯೋಜಿಸಿದ್ದು, ರಾಜು ಚಿತ್ರವನ್ನು ವಿತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net