

ಮುಂಬೈ: ಲಾಕ್ಡೌನ್ನಿಂದ ಕಳೆದ ಆರು ತಿಂಗಳಿನಿಂದ ನಿಂತಿದ್ದ ಸಲ್ಮಾನ್ ಖಾನ್ ಅಭಿನಯದ 'ರಾಧೆ - ಯುವರ್ ಮೋಸ್ಟ್ ವಾಂಟೆಡ್ ಭಾಯ್' ಚಿತ್ರದ ಚಿತ್ರೀಕರಣ ಕಳೆದ ವಾರವಷ್ಟೇ ಪುನಃ ಪ್ರಾರಂಭವಾಗಿದೆ. ಈಗಾಗಲೇ ಒಂದು ಹಾಡಿನ ಚಿತ್ರೀಕರಣ ಸಹ ಮುಗಿದಿದೆ.
ಈ ಮಧ್ಯೆ, ಚಿತ್ರತಂಡದಿಂದ ಒಂದು ಸುದ್ದಿ ಹೊರಬಿದ್ದಿದ್ದು, ಅದರ ಪ್ರಕಾರ ದಕ್ಷಿಣ ಕೊರಿಯಾದ ಜನಪ್ರಿಯ ಸಾಹಸ ನಿರ್ದೇಶಕರೆನಿಸಿಕೊಂಡಿರುವ ಕ್ವೋನ್ ಟಾಯ್-ಹೋ ಅವರನ್ನು ಕರೆಸಿ ಒಂದು ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆಯಂತೆ.
ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ತುಮಕೂರಲ್ಲಿ ದಾಖಲಾಯ್ತು ಎಫ್ಐಆರ್
ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಗೋವಾದ ಮಾಫಿಯಾ ವಿರುದ್ಧ ತಿರುಗಿಬೀಳುತ್ತಾರಂತೆ. ಈ ಸಂದರ್ಭದಲ್ಲಿ ಮಾಫಿಯಾದ ಬಾಸ್ ಮತ್ತು ರಾಧೆ ನಡುವೆ ಒಂದು ಭಯಂಕರ ಫೈಟ್ ಇದೆಯಂತೆ. ಆ ಫೈಟ್ ನಿರ್ದೇಶಿಸುವುದಕ್ಕೆ ದಕ್ಷಿಣ ಕೊರಿಯಾದಿಂದ ಟಾಯ್-ಹೋ ಅವರನ್ನು ಕರೆಸಲಾಗಿದೆ.
ಕಳೆದ ವರ್ಷವೇ ಟಾಯ್-ಹೋ ಅವರು ಭಾರತಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಈ ಸನ್ನಿವೇಶವನ್ನು ಹೇಗೆಲ್ಲಾ ಶೂಟ್ ಮಾಡಬೇಕೆಂಬ ಸುಧೀರ್ಘ ಚರ್ಚೆಯಾಗಿತ್ತು. ಅಷ್ಟೇ ಅಲ್ಲ, ಒಂದು ತಿಂಗಳ ಕಾಲ ಟಾಯ್-ಹೋ ಇಲ್ಲೇ ಇದ್ದು, ತಮ್ಮ ಭಾಗದ ಕೆಲಸವನ್ನು ಮುಗಿಸಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಬರೀ ಸಾಹಸ ದೃಶ್ಯಗಳನ್ನು ಸಂಯೋಜಿಸುವುದಷ್ಟೇ ಅಲ್ಲ, ಒಂದು ಚಿಕ್ಕ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದು, ಸಲ್ಮಾನ್ ಜತೆಗೆ ಮುಖಾಮುಖಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
'ರಾಧೆ' ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ನಾಯಕಿಯಾಗಿ ದಿಶಾ ಪಠಾಣಿ ನಟಿಸಿದ್ದು, ಮಿಕ್ಕಂತೆ ಜಾಕಿ ಶ್ರಾಫ್, ರಣದೀಪ್ ಹೂಡಾ ಮುಂತಾದವರು ನಟಿಸುತ್ತಿದ್ದಾರೆ. ಪ್ರಭುದೇವ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.