ರಿಯಾ ಎಲ್ಲಿದ್ದಾರೆ ಅಂತ ಗೊತ್ತಾಗಿದೆಯಂತೆ ... ಬಿಹಾರ ಪೊಲೀಸರ ಮುಂದಿನ ನಡೆಯೇನು?

Rhea Chakraborty - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವ ಆರೋಪ ಹೊತ್ತು ತಲೆ ಮರೆಸಿಕೊಂಡಿರುವ ಗೆಳತಿ ರಿಯಾ ಚಕ್ರವರ್ತಿ, ಎಲ್ಲಿದ್ದಾರೆ ಎಂದು ಸುಶಾಂತ್​ ಕುಟುಂಬದ ಲಾಯರ್​ಗೆ ಗೊತ್ತಿದೆಯಂತೆ.

ಈ ಕುರಿತು ಮಾಧ್ಯಮದವರ ಜತೆಗೆ ಮಾತನಾಡಿರುವ ಅವರು, ತಮಗೆ ರಿಯಾ ಎಲ್ಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ. ಗೊತ್ತಿದ್ದರೂ, ರಿಯಾ ಮತ್ತು ಕುಟುಂಬದವರ ಬಂಧನವೇಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆದರೆ, ಇಲ್ಲೊಂದು ತೊಡಕಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಸುಶಾಮತ್​ ಕುಟುಂಬದ ವಕೀಲರಾಗಿರುವ ವಿಕಾಸ್​ ಸಿಂಗ್​ ಹೇಳಿಕೊಂಡಿದ್ದಾರೆ.

'ನನಗೆ ರಿಯಾ ಎಲ್ಲಿದ್ದಾರೆ ಎಂಬುದು ಗೊತ್ತಿದೆ. ಆದರೆ, ಆ ಬಗ್ಗೆ ಈಗಲೇ ಹೇಳುವುದಕ್ಕೆ ಸಾಧ್ಯ ಇಲ್ಲ. ಇನ್ನು ಬಿಹಾರದ ಪೊಲೀಸರು ಅವರನ್ನು ಅರೆಸ್ಟ್​ ಮಾಡಲಾಗುತ್ತಿಲ್ಲ, ಏಕೆಂದರೆ ಹಿರಿಯ ಐಪಿಎಸ್​ ಅಧಿಕಾರಿಯಾದ ವಿನಯ್​ ತಿವಾರಿ ಅವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇನ್ನು ಅವರಿಗಿಂತ ಮುಂಚೆ ಬಂದ ತಂಡವನ್ನೂ ಕ್ವಾರಂಟೈನ್​ನಲ್ಲಿ ಇಡುವ ಬಗ್ಗೆ ಮಾತುಕತೆ ನಡೆಯುತ್ತಿದೆ, ಹಾಗಾಗಿ ರಿಯಾ ಅವರ ಬಂಧನ ಸಾಧ್ಯವಾಗುತ್ತಿಲ್ಲ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದು, ಯಾಕೆ ತಮಗೆ ಸುಶಾಂತ್​ ಸಾವಿಗೆ ರಿಯಾ ಕಾರಣ ಎಂದನಿಸುತ್ತಿದೆ ಎಂದು ಎಂಟು ಅಂಶಗಳನ್ನು ಪಟ್ಟಿ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸುಶಾಂತ್​ ಅವರ ಬಾಡಿಗಾರ್ಡ್​ ಸಹ ರಿಯಾ ವಿರುದ್ಧ ಕೆ.ಕೆ. ಸಿಂಗ್​ ವ್ಯಕ್ತಪಡಿಸಿರುವ ಅನುಮಾನ ಸರಿಯಾಗಿಯೇ ಇದೆ ಎಂದು ಅಭಿಪ್ರಾಯಪಟ್ಟಿದ್ದರು.

ಯಾವಾಗ ತಮ್ಮ ಮೇಲೆ ಆರೋಪ ಕೇಳಿಬಂತೋ, ರಿಯಾ ಮತ್ತು ಅವರ ಕುಟುಂಬದವರು ರಾತ್ರೋರಾತ್ರಿ ಮನೆ ಖಾಲೆ ಮಾಡಿದ್ದಾರೆ. ಅವರು ಎಲ್ಲಿದ್ದಾರೆ ಎಂಬ ವಿಷಯ ಇನ್ನೂ ಬಹಿರಂಗವಾಗಿಲ್ಲ. ಈ ಮಧ್ಯೆ, ರಿಯಾ ಒಮ್ಮೆ ಲೈವ್​ ಬಂದು, ತಾನು ತಪ್ಪಿತಸ್ಥೆಯಲ್ಲ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net