ಸಾರಾ ಬಿಟ್ಟು ಹೋದಾಗ ಮಗುವಿನಂತೆ ಅತ್ತಿದ್ದರಂತೆ ಸುಶಾಂತ್

Sushant and Sara
Published on

ಸುಶಾಂತ್ ಸಿಂಗ್ ರಜಪೂತ್‍ಗೆ ಅಂಕಿತಾ ಲೋಖಂಡೆ ಮತ್ತು ರಿಯಾ ಚಕ್ರವರ್ತಿ ಅಲ್ಲದೆ, ಸಾರಾ ಅಲಿ ಖಾನ್ ಜತೆಗೂ ಲವ್ ಇತ್ತು ಎಂಬುದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಅವರಿಬ್ಬರ ನಡುವೆ ಪ್ರೀತಿ ಇತ್ತು ಮತ್ತು `ಸೋಂಚರಿಯಾ' ಚಿತ್ರದ ನಂತರ ಸುಶಾಂತ್ ಅವರನ್ನು ಸಾರಾ ಬಿಟ್ಟು ಹೋದರು ಎಂದು ಸುಶಾಂತ್ ಸ್ನೇಹಿತ ಸ್ಯಾಮ್ಯುಯಲ್ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಕಳೆದ ವರ್ಷ ಯೂರೋಪ್ ಟ್ರಿಪ್‍ಗಿಂತ ಮುನ್ನ ಸುಶಾಂತ್ ಮತ್ತು ಸಾರಾ ಇತರೆ ಸ್ನೇಹಿತರ ಜತೆಗೆ ಬ್ಯಾಂಕಾಕ್‍ಗೆ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಮೂರು ದಿನಗಳ ಕಾಲ ಸುಶಾಂತ್ ಮತ್ತು ಸಾರಾ ರೂಮ್ ಬಿಟ್ಟು ಹೊರಬರಲೇ ಇಲ್ಲ ಎಂಬ ವಿಷಯವನ್ನು ಇನ್ನೊಬ್ಬ ಸ್ನೇಹಿತ ಹೇಳಿಕೊಂಡಿದ್ದಾರೆ.

ಈಗ ಸುಶಾಂತ್ ಅವರ ಸಂಬಂಧಿಯಾ ಸ್ಮಿತಾ ಪಾರೀಖ್ ಎನ್ನುವವರು ಸಹ ಸಾರಾ ಮತ್ತು ಸುಶಾಂತ್ ಅವರ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಸಾರಾ ಬಿಟ್ಟು ಹೋದ ಸಂದರ್ಭದಲ್ಲಿ, ಸುಶಾಂತ್ ಮಗುವಿನಂತೆ ಅತ್ತಿದ್ದರು ಎಂದು ಹೇಳಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, `ಅದು ಸುಶಾಂತ್ ಮಟ್ಟಿಗೆ ಡಬ್ಬಲ್ ಆಘಾತ. ಸಾರಾ ಅವರನ್ನು ಸುಶಾಂತ್ ಬಹಳ ಪ್ರೀತಿಸುತ್ತಿದ್ದರು. ಇನ್ನೊಂದು ಕಡೆ `ಸೋಂಚರಿಯಾ' ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರ ಸೋಲುವುದಕ್ಕೂ, ಸಾರಾ ಅವರ ಜೀವನದಿಂದ ಹೊರನಡೆಯುವುದಕ್ಕೂ ಸರಿ ಹೋಯಿತು. ಇದರಿಂದ ಅವರು ಬಹಳ ಆಘಾತಕ್ಕೊಳಗಾಗಿದ್ದರು. ಒಮ್ಮೆ ಸಿಕ್ಕಾಗ, ಸಾರಾ ಅವರನ್ನು ನೆನಪಿಸಿಕೊಂಡು ಮಗುವಿನಂತೆ ಅತ್ತಿದ್ದರು' ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರನ್ನು ಸಮಾಧಾನಿಸಿದ ಸ್ಮಿತಾ, ಸಾರಾ ಬದಲು ಇನ್ನೊಬ್ಬ ಹುಡುಗಿಯನ್ನು ಹುಡುಕಿಕೊಡುವುದಾಗಿ ಹೇಳಿದ್ದರಂತೆ. ಅದಾದ ಕೆಲವೇ ದಿನಗಳಲ್ಲಿ, ಸುಶಾಂತ್ ಬದುಕಿಗೆ ರಿಯಾ ಎಂಟ್ರಿಯಾಗಿದೆ. ಆ ನಂತರ ಅವರು ಸಾರಾ ಬಗ್ಗೆ ಕ್ರಮೇಣ ಮಾತನಾಡುವುದನ್ನು ನಿಲ್ಲಿಸಿದರು ಎಂದು ಹೇಳಿದ್ದಾರೆ ಸ್ಮಿತಾ ಪಾರೀಖ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net