

ಬೆಂಗಳೂರು: ವಾರಕ್ಕೆ ಮಿನಿಮಮ್ ಒಂದು ಹೊಸಬರ ಚಿತ್ರವಾದರೂ ಸೆಟ್ಟೇರುತ್ತದೆ ಮತ್ತು ಬಿಡುಗಡೆಯಾಗುತ್ತದೆ. ಇನ್ನು, ಈ ಸಂಖ್ಯೆಯಲ್ಲಿ ಹೆಚ್ಚಳ ಇರಬಹುದೇ ಹೊರತು, ಕಡಿಮೆ ಇರುವುದಿಲ್ಲ. ಈ ವಾರ ಸದ್ದಿಲ್ಲದೆ 'ಸೂರ್ಯ' ಎಂಬ ಇನ್ನೊಂದು ಹೊಸಬರ ಚಿತ್ರ ಸೆಟ್ಟೇರಿದೆ. ಪ್ರಶಾಂತ್ ಮತ್ತು ಹರ್ಷಿತಾ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ-ನಾಯಕಿಯಾಗಿ ಪರಿಚಿತರಾಗುತ್ತಿದ್ದಾರೆ.
ಈ ಹಿಂದೆ ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಸಾಗರ್ ಈಗ ನಿರ್ದೇಶಕರುದು. ಇದೊಂದು ವಿಭಿನ್ನವಾದ ಮಾಸ್ ಲವ್ ಸ್ಟೋರಿ ಎನ್ನುವ ಅವರು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನ ಹೆಸರು ಸೂರ್ಯ ಅಂತೆ, ಕಥೆ ಅವನ ಸುತ್ತಲೇ ಸುತ್ತುವುದರಿಂದ ಚಿತ್ರಕ್ಕೂ 'ಸೂರ್ಯ' ಎಂಬ ಹೆಸರನ್ನು ಇಡಲಾಗಿದೆ.
'ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥೆ. ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎಂದು ಮಾಹಿತಿ ಕೊಡುತ್ತಾರೆ ಸಾಗರ್.
ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ, ಹಾಡುಗಳನ್ನು ಮಡಿಕೇರಿ, ಮೈಸೂರು, ಪೂನಾ ಮುಂತಾದ ಕಡೆ ಚಿತ್ರೀಕರಣ ಮಾಡಲಾಗುವುದಂತೆ. ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರು.
'ಸೂರ್ಯ' ಚಿತ್ರವನ್ನು ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ನಿರ್ಮಾಣ ಮಾಡುತ್ತಿದ್ದಾರೆ.