

ಮುಂಬೈ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಮತ್ತು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಪುತ್ರ ಅಭಿಷೇಕ್ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಐಶ್ವರ್ಯಾವಾಗಲಿ ಅಥವಾ ಬಚ್ಚನ್ ಕುಟುಂಬವಾಗಲಿ ಯಾವುದೇ ಹೇಳಿಕೆ ನೀಡದಿದ್ದರೂ ಮೌನ ವಹಿಸಿರುವುದು ಕೂಡ ನಾನಾ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಐಶ್ವರ್ಯಾ ರೈ ಅವರು ಬಚ್ಚನ್ ಕುಟುಂಬವನ್ನು ತೊರೆದಿದ್ದಾರೆ ಎಂಬ ಸಂಗತಿಯೂ ಚರ್ಚೆಯಾಗುತ್ತಿದೆ. ಯಾವಾಗ ಐಶ್ವರ್ಯಾ ಡಿವೋರ್ಸ್ ವದಂತಿ ಹರಿದಾಡಲು ಆರಂಭವಾಯಿತೋ ಅವರಿಗೆ ಸಂಬಂಧಿಸಿದ ಹಳೆಯ ಸಂಗತಿಗಳು ಕೂಡ ಜಾಲತಾಣದಲ್ಲಿ ಮುನ್ನೆಲೆಗೆ ಬರುತ್ತಿವೆ.
ಇದೀಗ ಹಿರಿಯ ನಟ ಸುರೇಶ್ ಒಬೆರಾಯ್, ತಮ್ಮ ಮಗ ವಿವೇಕ್ ಒಬೆರಾಯ್ ಜತೆಗಿನ ಐಶ್ವರ್ಯಾ ಸಂಬಂಧದ ಬಗ್ಗೆ ಕೆಲವೊಂದಿಷ್ಟು ಆಸಕ್ತಿಕರ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಶಾಹೀದ್ ಕಪೂರ್ ನಟನೆಯ ಕಬೀರ್ ಸಿಂಗ್ ಸಿನಿಮಾದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಗಮನ ಸೆಳೆದಿದ್ದ ಸುರೇಶ್ ಒಬೆರಾಯ್, ಇತ್ತೀಚೆಗೆ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂ. ಗೂ ಅಧಿಕ ಗಳಿಕೆಯೊಂದಿಗೆ ಸದ್ದು ಮಾಡಿದ ಅನಿಮಲ್ ಸಿನಿಮಾದಲ್ಲೂ ತಮ್ಮ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಸಿನಿಮಾ ಯಶಸ್ಸಿನ ಬೆನ್ನಲ್ಲೇ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನಟನೆ, ವೃತ್ತಿ ಜೀವನ ಮತ್ತು ತಮ್ಮ ಪುತ್ರನ ವಿವಾದಾತ್ಮಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಐಶ್ವರ್ಯಾ ರೈ ಜತೆಗಿನ ತಮ್ಮ ಮಗನ ಸಂಬಂಧದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಜತೆ ಡೇಟಿಂಗ್ ಮಾಡುತ್ತಿದ್ದ ಐಶ್ವರ್ಯಾ 2002ರಲ್ಲಿ ಬ್ರೇಕಪ್ ಮಾಡಿಕೊಂಡ ಬಳಿಕ ವಿವೇಕ್ ಒಬೆರಾಯ್ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು ಎಂದು ಹೇಳಲಾಗಿದೆ. ಆದರೆ, ಈ ಸಂಬಂಧ ಹೆಚ್ಚು ಹೊತ್ತು ಉಳಿಯದೇ 2003ರಲ್ಲಿ ಅಂತ್ಯಗೊಂಡಿತು. ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿವೇಕ್, ಐಶ್ವರ್ಯಾ ಜತೆಗಿನ ತಮ್ಮ ಸಂಬಂಧದ ವದಂತಿಯ ಬಗ್ಗೆ ಸಲ್ಮಾನ್ ಖಾನ್ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದರು. ಈ ಸಮಯದಲ್ಲಿ ಈ ಸಂಗತಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿವೇಕ್ ತಂದೆ ಸುರೇಶ್ ಒಬೆರಾಯ್ ಈ ವಿಚಾರದಲ್ಲಿ ಮೌನ ಮುರಿದಿದ್ದಾರೆ.
ಅನಿಮಲ್ ಯಶಸ್ಸಿನ ಬಗ್ಗೆ ಲೆಹ್ರೆನ್ ಮಾಧ್ಯಮದ ಜತೆ ಮಾತನಾಡಿದ ಸುರೇಶ್ ಒಬೆರಾಯ್, ಐಶ್ವರ್ಯಾ ಜತೆಗೆ ತಮ್ಮ ಪುತ್ರ ವಿವೇಕ್ ಸಂಬಂಧದ ವದಂತಿಯ ಬಗ್ಗೆ ನನಗೆ ತಿಳಿದಿರಲಿಲ್ಲ ಎಂದಿದ್ದಾರೆ. ಆದಾಗ್ಯೂ ರಾಮ್ ಗೋಪಾಲ್ ವರ್ಮಾ ಬಹಿರಂಗಪಡಿಸಿದ ಬಳಿಕ ಗೊತ್ತಾಯಿತು. ಆದರೂ ಈ ವಿಚಾರದಲ್ಲಿ ನಾನು ಆರ್ಜಿವಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ ಎಂದರು.
ಸಲ್ಮಾನ್ ಖಾನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ ಸುರೇಶ್ ಒಬೆರಾಯ್, ನನ್ನೊಂದಿಗೆ ಮಾತನಾಡುವಾಗ ಖಾನ್ ಯಾವಾಗಲೂ ಗೌರವ ಸೂಚಿಸುತ್ತಾರೆ. ವಿವೇಕ್ ಪ್ರಕರಣದಲ್ಲಿ ನಾನು ಆ ಸಮಯದಲ್ಲಿ ಮತ್ತು ಈಗಲೂ ಸಹ ಸಮಾಧಾನದಲ್ಲಿದ್ದೇನೆ. ಇಂದಿಗೂ ನಾವೆಲ್ಲ ಒಬ್ಬರಿಗೊಬ್ಬರು ಬಹಳ ಚೆನ್ನಾಗಿಯೇ ಭೇಟಿಯಾಗುತ್ತೇವೆ. ಸಲ್ಮಾನ್ ಖಾನ್ ನನ್ನನ್ನು ಭೇಟಿಯಾದಾಗಲೆಲ್ಲಾ ಸಿಗರೇಟ್ ಬಚ್ಚಿಟ್ಟು ಗೌರವಾರ್ಥವಾಗಿ ಮಾತನಾಡುತ್ತಾರೆ. ಸಾಕಷ್ಟು ಘಟನೆಗಳು ಘಟಿಸಿವೆ. ಆದರೆ, ನನ್ನ ಸಂಬಂಧಗಳು ಉತ್ತಮವಾಗಿವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಬಗ್ಗೆ ಮಾತನಾಡಿದ ಸುರೇಶ್ ಒಬೆರಾಯ್, ಅಮಿತಾಭ್ ಎಂದಿಗೂ ಸ್ನೇಹಿತರಾಗಿರಲಿಲ್ಲ. ನಾವಿಬ್ಬರು ಸಹ-ನಟರಾಗಿದ್ದೆವು. ಅಂದರೆ, ವೃತ್ತಿಪರ ಸ್ನೇಹವನ್ನು ಹೊಂದಿದ್ದೆವು. ನನ್ನ ಸ್ನೇಹ ಡ್ಯಾನಿ ಮುಕುಲ್ ಜೊತೆ ಇತ್ತು. ಹೌದು, ಬಚ್ಚನ್ ಅವರು ತಮ್ಮ ಹುಟ್ಟುಹಬ್ಬಕ್ಕೆ ನನ್ನನ್ನು ಆಹ್ವಾನಿಸಿದರು. ನಾವು ಭೇಟಿಯಾದಾಗಲೆಲ್ಲ ಒಬ್ಬರಿಗೊಬ್ಬರು ಚೆನ್ನಾಗಿಯೇ ಇರುತ್ತೇವೆ ಎಂದು ಹೇಳಿದರು.
ಐಶ್ವರ್ಯಾ ಮತ್ತು ವಿವೇಕ್, ಇಬ್ಬರು ಬೇರೆ ಬೇರೆಯಾದ ಹಲವು ವರ್ಷಗಳ ಬಳಿಕ ವಿವೇಕ್ ಒಬೆರಾಯ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಿಂದಿನ ಸಂಬಂಧದ ಬಗ್ಗೆ ಮಾತನಾಡಿದರು. ಅವರು ಹಲವಾರು ಬಾರಿ ನನ್ನನ್ನು ನೋಯಿಸಿದ್ದಾರೆ ಎಂದು ಹೆಸರೇಳೆದೆ ಮಾತನಾಡಿದರು. ಆದರೆ, ಅವರು ಮಾತನಾಡಿದ್ದು ಐಶ್ವರ್ಯಾ ರೈ ಬಗ್ಗೆ ಎಂಬುದು ಎಲ್ಲರಿಗೂ ತಿಳಿದಿದೆ. ಸದ್ಯ ಐಶ್ವರ್ಯಾ ರೈ ಹೆಸರು ಬಾಲಿವುಡ್ ಅಂಗಳದಲ್ಲಿ ಹೆಚ್ಚು ಚರ್ಚೆಯಾಗುತ್ತಿದ್ದು, ತಮ್ಮ ಸುತ್ತ ಹರಡುತ್ತಿರುವ ವದಂತಿಗಳಿಗೆ ಸ್ವತಃ ಐಶ್ವರ್ಯಾ ರೈ ಮತ್ತು ಬಚ್ಚನ್ ಕುಟುಂಬ ಸ್ಪಷ್ಟನೆ ನೀಡಬೇಕಿದೆ. (ಏಜೆನ್ಸೀಸ್)