ಸೌಟ್ ಹಿಡಿದ ಅನಿರುದ್ಧ್; ಹೊಸ ಚಿತ್ರದ ಶೀರ್ಷಿಕೆ ರಿಲೀಸ್ ಮಾಡಿದ ಸುದೀಪ್

chef chidambara
Published on

ಬೆಂಗಳೂರು: ಕಳೆದ ಐದು ವರ್ಷಗಳಿಂದ ಕಿರುತೆರೆ ‘ಜೊತೆ ಜೊತೆಯಲಿ’ ಬಿಜಿಯಿದ್ದ ನಟ ಅನಿರುದ್ಧ್ ಈಗ ಹಿರಿತೆರೆಗೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ‘ರಾಘು’ ಚಿತ್ರದ ನಿರ್ದೇಶಕ ಎಂ. ಆನಂದ ರಾಜ್ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ಶೆಫ್​ ಚಿದಂಬರ’ ಚಿತ್ರಕ್ಕೆ ಅನಿರುದ್ಧ್ ನಾಯಕರಾಗಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಮೈಸೂರಿನ ಡಾ. ವಿಷ್ಣುವರ್ಧನ್ ಸ್ಮಾರಕದ ಬಳಿ ಚಿತ್ರವನ್ನು ಲಾಂಚ್ ಮಾಡಿದರು. ಡಾರ್ಕ್ ಕಾಮಿಡಿ ಜಾನರ್ ಸಿನಿಮಾ ಇದಾಗಿದ್ದು, ಶೆಫ್ ಪಾತ್ರದಲ್ಲಿ ಅನಿರುದ್ಧ್ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಚಿತ್ರದ ಪೋಸ್ಟರ್ ಕೂಡ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇದೇ ತಿಂಗಳ 10ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಅನಿರುದ್ಧ್‌ಗೆ ನಾಯಕಿಯಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್ 2’ ಖ್ಯಾತಿಯ ರೇಚಲ್ ಡೇವಿಡ್ ಬಣ್ಣ ಹಚ್ಚಲಿದ್ದಾರೆ. ಇವರ ಜತೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಖ್ಯ ತಾರಾಗಣದಲ್ಲಿದ್ದಾರೆ. ಉಳಿದಂತೆ ಚಿತ್ರಕ್ಕೆ, ಗಣೇಶ್ ಪರಶುರಾಮ್ ಸಂಭಾಷಣೆ, ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ವಿಜೇತ್ ಚಂದ್ರ ಸಂಕಲನವಿರಲಿದೆ.

ಕಿಚ್ಚ ಸುದೀಪ್, ನಟ:
ನನಗೆ ಅಡುಗೆ ಮಾಡುವುದೆಂದರೆ ಇಷ್ಟ. ಕುಕಿಂಗ್‌ಗೂ ನನಗೂ ಭಾವನಾತ್ಮಕ ನಂಟು. ಅನಿರುದ್ಧ್ ಅವರ ‘ಶ್ೆ ಚಿದಂಬರ’ ಸಿನಿಮಾ ಇಂಟರೆಸ್ಟಿಂಗ್ ಆಗಿದೆ. ಪೋಸ್ಟರ್ ತುಂಬ ಚೆನ್ನಾಗಿದೆ. ಐದು ವರ್ಷಗಳ ನಂತರ ಅನಿರುದ್ಧ್ ಮತ್ತೆ ಸಿನಿಮಾಗಾಗಿ ಮೇಕಪ್ ಹಾಕಿಕೊಳ್ಳುತ್ತಿದ್ದಾರೆ. ಅವರಿಗೆ ಮತ್ತು ಇಡೀ ಚಿತ್ರತಂಡಕ್ಕೆ ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net