

ಬೆಂಗಳೂರು: ಮಹೇಶ್ ಬಾಬು ಅಭಿನಯದ ‘ಸರ್ಕಾರಿ ವಾರು ಪಾಟ’ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುದೀಪ್ ಅವರಿಗೆ ಆಫರ್ ನೀಡಲಾಗಿದೆ ಎಂಬಂತಹ ಸುದ್ದಿಗಳು ಎರಡು ದಿನಗಳಿಂದ ಕೇಳಿ ಬರುತ್ತಿವೆ. ಆದರೆ, ಸುದೀಪ್ ಅವರ ಕಡೆಯಿಂದ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ. ಹಾಗಾಗಿ ಅವರು ಈ ಚಿತ್ರದಲ್ಲಿ ನಟಿಸುತ್ತಾರೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹಾಗೆ ನೋಡಿದರೆ, ಸುದೀಪ್ ಅವರಿಗೆ ಆಫರ್ ಬಂದಿರುವುದು ‘ಸರ್ಕಾರಿ ವಾರು ಪಾಟ’ ಚಿತ್ರದಿಂದ ಮಾತ್ರವಲ್ಲ. ಮೂಲಗಳ ಪ್ರಕಾರ, ದಕ್ಷಿಣ ಭಾರತದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’, ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಮತ್ತು ಸಿಂಬು ಅಭಿನಯದ ‘ಮಾನಾಡು’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವುದಕ್ಕೆ ಆಫರ್ ಬಂದಿದೆಯಂತೆ. ಈಗಾಗಲೇ ಈ ನಾಲ್ಕು ಚಿತ್ರತಂಡದವರು, ಸುದೀಪ್ ಅವರನ್ನು ಸಂರ್ಪಸಿ, ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿಕೊಂಡಿದ್ದಾರಂತೆ.
ಈಗಾಗಲೇ ‘ಅಣ್ಣಾತ್ತೆ’ ಮತ್ತು ‘ಇಂಡಿಯನ್ 2’ ಚಿತ್ರಗಳ ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನು ‘ಮಾನಾಡು ಮತ್ತು’ ‘ಸರ್ಕಾರಿ ವಾರು ಪಾಟ’ ಚಿತ್ರಗಳ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಬಹುಶಃ ಲಾಕ್ಡೌನ್ ಇಲ್ಲದಿದ್ದರೆ, ಇಷ್ಟರಲ್ಲಿ ಸುದೀಪ್ ಯಾವ ಚಿತ್ರಗಳಲ್ಲಿ ನಟಿಸುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಸಿಗುತಿತ್ತು. ಆದರೆ, ಈಗ ಹಾಗಿಲ್ಲ. ಚಿತ್ರೀಕರಣ ಮಾಡುವುದಕ್ಕೆ ಪೂರ್ಣಪ್ರಮಾಣವಾದ ಅನುಮತಿ ಸಿಕ್ಕರೆ, ಈ ನಾಲ್ಕೂ ಚಿತ್ರಗಳ ಚಿತ್ರೀಕರಣ ಶುರುವಾಗಲಿದೆ.
ಇದನ್ನೂ ಓದಿ: VIDEO|ಗಡ್ಡ ಪ್ರಿಯರು ತಲೆ ಕೆಡಿಸಿಕೊಳ್ಳಬೇಕಾದ ಸುದ್ದಿ!
ಈ ಮಧ್ಯೆ, ಜುಲೈ ಒಂದರಿಂದ ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಸುದೀಪ್. ಸದ್ಯಕ್ಕೆ ಹೈದರಾಬಾದ್ನಲ್ಲಿ ಚಿತ್ರದ ಸೆಟ್ಗಳಿಗೆ ಅಂತಿಮ ರೂಪ ಕೊಡಲಾಗುತ್ತಿದ್ದು, ಈ ತಿಂಗಳ ಕೊನೆಯ ಹೊತ್ತಿಗೆ ಸೆಟ್ ಸಂಪೂರ್ಣವಾಗಲಿದೆ. ಆ ನಂತರ ‘ಫ್ಯಾಂಟಮ್ ಚಿತ್ರಕ್ಕೆ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಯಲಿದೆ. ಹಾಗಾಗಿ ಆ ನಂತರವಷ್ಟೇ ಸುದೀಪ್, ಯಾವುದಾದರೂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಬಹುದು ಎಂದು ಹೇಳಲಾಗುತ್ತಿದೆ.
ಇಷ್ಟಕ್ಕೂ, ಈ ನಾಲ್ಕು ಚಿತ್ರಗಳಲ್ಲಿ ಸುದೀಪ್ ಯಾವ ಚಿತ್ರ ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.