

ಬಾಲಿವುಡ್ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಇತ್ತೀಚೆಗೆ ಚರ್ಚೆ ಆಗುತ್ತಲೇ ಇದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಈ ಚರ್ಚೆಗೆ ಒಂದು ವೇದಿಕೆ ಸಿಕ್ಕಂತಾಗಿದ್ದು, ಸ್ಟಾರ್ ಮಕ್ಕಳ ಮೇಲೆ ಎಲ್ಲರೂ ದೊಣ್ಣೆ ಬೀಸುವುದರಲ್ಲಿ ನಿರತರಾಗಿದ್ದಾರೆ.
ಆದರೆ, ಈ ಚರ್ಚೆ ಇಂದು-ನಿನ್ನೆಯದಲ್ಲ. ಕೆಲವು ವರ್ಷಗಳ ಹಿಂದೆಯೇ ಕಂಗನಾ ರಣೌತ್ ಇಂಥದ್ದೊಂದು ಚರ್ಚೆ ಹುಟ್ಟುಹಾಕಿದ್ದರು. ಬಾಲಿವುಡ್ ನಿರ್ಮಾಪಕರು ಸ್ಟಾರ್ ಮಕ್ಕಳಿಗೆ ಮಣೆ ಹಾಕುತ್ತಿರುವುದರಿಂದ, ಹೊರಗಿನವರಿಗೆ ಮತ್ತು ಹೊಸಬರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂದು ಹೇಳಿದ್ದರು. ಅಷ್ಟೇ ಅಲ್ಲ, ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹಾರ್, ಸ್ವಜನಪಕ್ಷಪಾತವನ್ನು ಪೋಷಿಸುತ್ತಿದ್ದಾರೆ ಎಂದು ದೂರಿದ್ದರು.
ಕಂಗನಾ ಹೇಳುವುದರಲ್ಲಿ ಎಷ್ಟು ನಿಜವಿದೆಯೋ, ಎಷ್ಟು ಸುಳ್ಳಿದೆಯೋ ಗೊತ್ತಿಲ್ಲ. ಆದರೆ, ಎಲ್ಲಾ ಕಾಲಕ್ಕೂ ಸ್ವಜನಪಕ್ಷಪಾತದಿಂದ ಕಲಾವಿದರು ಚಿತ್ರರಂಗದಲ್ಲಿ ಗಟ್ಟಿಸ್ಥಾನ ಪಡೆದಿದ್ದಾರೆ ಎನ್ನುವುದು ಸುಳ್ಳು ಎಂದು ಇತಿಹಾಸ ಆಗಾಗ ಹೇಳುತ್ತಲೇ ಬಂದಿದೆ. ಸ್ಟಾರ್ ಮಕ್ಕಳೆಂದರೆ, ಅವರಿಗೆ ಅವಕಾಶ ಸ್ವಲ್ಪ ಸುಲಭವಾಗಿ ಸಿಗಬಹುದು. ಆದರೆ, ಅವರು ವೃತ್ತಿಜೀವನದಲ್ಲಿ ಹೆಸರು ಮಾಡಬೇಕು ಎಂದರೆ, ಅದಕ್ಕೆ ಮುಖ್ಯವಾಗಿರುವುದು ತಂದೆ-ತಾಯಿಯ ಹೆಸರಲ್ಲ, ಬದಲಿಗೆ ಯಶಸ್ಸು ಎಂದು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಇದಕ್ಕೆ ಉದಾಹರಣೆಯಾಗಿ ಹಲವು ಸ್ಟಾರ್ ಮಕ್ಕಳು ನಮ್ಮೊಡನಿದ್ದಾರೆ.
ಈ ಪೈಕಿ ಪ್ರಮುಖ ಹೆಸರೆಂದರೆ ಅಭಿಷೇಕ್ ಬಚ್ಚನ್ ಅವರದ್ದು. ಬಿಗ್ ಬಿ ಅಮಿತಾಭ್ ಬಚ್ಚನ್ ಮಗನೆಂಬ ಮಾತ್ರಕ್ಕೆ ಅಭಿಷೇಕ್ಗೆ ಚಿತ್ರರಂಗದಲ್ಲಿ ಎಲ್ಲವೂ ಸಲೀಸಾಗಿ ಸಿಕ್ಕಿತು ಎಂದು ಹೇಳುವುದು ಕಷ್ಟ. 20 ವರ್ಷಗಳ ಹಿಂದೆ ಅಭಿಷೇಕ್ ಚಿತ್ರರಂಗಕ್ಕೆ ಬರುವುದಕ್ಕೂ ಕಷ್ಟಪಟ್ಟರು, ಈಗಲೂ ಕಷ್ಟಪಡುತ್ತಿದ್ದಾರೆ ಎಂದರೆ, ಅದರಲ್ಲಿ ಸುಳ್ಳೇನಿಲ್ಲ. ಚಿತ್ರರಂಗಕ್ಕೆ ಬಂದು 20 ವರ್ಷಗಳಾದರೂ, ಅಭಿಷೇಕ್ ಕೈಯಲ್ಲಿ ಅಷ್ಟೇನೂ ದೊಡ್ಡ ಚಿತ್ರಗಳಿಲ್ಲ. ಹಾಗೆಯೇ ಚಿತ್ರರಂಗದಲ್ಲಿ ಅವರು ಬೇಡಿಕೆಯ ನಟರಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ಕಾರಣ, ಚಿತ್ರಗಳ ಸೋಲು. ಅಭಿಷೇಕ್ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ಮಾಡಿದರೂ, ದೊಡ್ಡದೊಡ್ಡ ನಿರ್ದೇಶಕರ ಜತೆಗೆ ಕೆಲಸ ಮಾಡಿದರೂ, ಅವರ ಚಿತ್ರಗಳ್ಯಾವುವೂ ಬ್ಲಾಕ್ಬಸ್ಟರ್ಗಳಾಗಲೇ ಇಲ್ಲ. ಅದೇ ಕಾರಣಕ್ಕೆ ಅಭಿಷೇಕ್, ಈಗಲೂ ಒದ್ದಾಡುತ್ತಲೇ ಇದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಗಳ ಕಥೆ ಏನು? ಅನುಷ್ಕಾ ಹೇಳ್ತಾರೆ ಕೇಳಿ …
ಇದು ಅವರೊಬ್ಬರ ಕಥೆಯಲ್ಲ. ಬಾಲಿವುಡ್ನಲ್ಲಿ ಈಗಲೂ ಸ್ಟ್ರಗಲ್ ಮಾಡುತ್ತಿರುವ ಹಲವು ಕಲಾವಿದರಿದ್ದಾರೆ. ಧರ್ಮೇಂದ್ರ ಮಕ್ಕಳಾದ ಬಾಬ್ಬಿ ಡಿಯೋಲ್ ಮತ್ತು ಇಷಾ ಡಿಯೋಲ್, ವಿನೋದ್ ಖನ್ನಾ ಮಗ ಅಕ್ಷಯ್ ಖನ್ನಾ, ರಾಜೇಶ್ ಖನ್ನಾ ಮಗಳು ಟ್ವಿಂಕಲ್ ಖನ್ನಾ, ಯಶ್ ಚೋಪ್ರಾ ಮಗ ಉದಯ್ ಚೋಪ್ರಾ, ಜಿತೇಂದ್ರ ಮಗ ತುಷಾರ್ ಕಪೂರ್, ಅನಿಲ್ ಕಪೂರ್ ಮಗ ಹರ್ಷವರ್ಧನ್ ಕಪೂರ್, ಬೋನಿ ಕಪೂರ್ ಮಗ ಅರ್ಜುನ್ ಕಪೂರ್, ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ, ಅನುಪಮ್ ಖೇರ್ ಮಗ ಸಿಖಂದರ್ ಖೇರ್, ರಾಜ್ ಬಬ್ಬರ್ ಮಗ ಪ್ರತೀಕ್ ಬಬ್ಬರ್, ಮಿಥುನ್ ಚಕ್ರವರ್ತಿ ಮಗ ಮಹಾಕ್ಷಯ್ ಚಕ್ರವರ್ತಿ ... ಹೀಗೆ ಪಟ್ಟಿ ದೊಡ್ಡದಿದೆ.
ಇವರೆಲ್ಲರೂ ಸ್ಟಾರ್ಗಳ ಮಕ್ಕಳೇ. ಇವರು ಚಿತ್ರರಂಗಕ್ಕೆ ಲಾಂಚ್ ಆಗಿದ್ದು ದೊಡ್ಡದಾಗಿಯೇ. ಆದರೆ, ಆ ನಂತರ ಎಲ್ಲರಿಗೂ ಯಶಸ್ಸು ಮರೀಚಿಕೆಯಾಗಿಯೇ ಉಳಿಯಿತು. ಹಾಗಾಗಿ, ಹೆಸರಿಗೆ ಸ್ಟಾರ್ ಕಿಡ್ಸ್ ಆದರೂ, ಇವರು ಈಗಲೂ ಸ್ಟ್ರಗಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಚಿತ್ರರಂಗ ಬಿಟ್ಟು, ಬೇರೇನೋ ಮಾಡುತ್ತಿದ್ದಾರೆ. ಇವರೆಲ್ಲಾ ಮನಸ್ಸು ಮಾಡಿದ್ದರೆ, ಚಿತ್ರರಂಗದಲ್ಲಿ ನಿಲ್ಲುವುದು, ಇನ್ನೊಂದಿಷ್ಟು ಚಿತ್ರಗಳನ್ನು ಮಾಡುವುದಕ್ಕೆ ಆಗುತ್ತಿರಲಿಲ್ಲ ಎಂದು ಹೇಳುವುದು ಕಷ್ಟ. ಬಹುಶಃ ಒಂದು ದೊಡ್ಡ ಬ್ಲಾಕ್ಬಸ್ಟರ್ ಇವರಿಗೆ ಸಿಕ್ಕಿದ್ದರೆ, ಇವರ ಜತೆಗೆ ಕೆಲಸ ಮಾಡುವುದಕ್ಕೆ ಇನ್ನಷ್ಟು ಜನರಿಗೆ ಉತ್ಸಾಹ ಬರುತಿತ್ತೋ ಏನೋ, ಆದರೆ, ಆ ಯಶಸ್ಸು ಮೈನಸ್ ಆಗಿದ್ದರಿಂದ, ಅವರೂ ಸಹ ಮೈನಸ್ ಆದರು.
ಈಗ ಹೇಳಿ, ಸ್ವಜನಪಕ್ಷಪಾತದಿಂದ ಎಲ್ಲರೂ ಚಿತ್ರರಂದಲ್ಲಿ ನೆಲೆಯೂರುವುದಕ್ಕೆ ಸಾಧ್ಯವಾ?