ಹಲವು ದೇವರುಗಳಿಗೆ ಹರಕೆ ಹೊತ್ತ ನಂತರ ಹುಟ್ಟಿದವನು ಸುಶಾಂತ್​ ಸಿಂಗ್​ ರಜಪೂತ್​

sushant
Published on

ಮುಂಬೈ: ಹಲವು ದೇವರುಗಳಿಗೆ ಹರಕೆ ಹೊತ್ತ ಬಳಿಕ ಹುಟ್ಟಿದವನು ಸುಶಾಂತ್​ ಸಿಂಗ್​ ರಜಪೂತ್​. ನಮ್ಮ ಪ್ರೀತಿಯ ಹಾಗೂ ವಿಧೇಯ ಪುತ್ರನಾಗಿದ್ದ. ನಮ್ಮ ಏಕೈಕ ಪುತ್ರನಾಗಿದ್ದ ಕಾರಣ ನಮ್ಮ ನಡುವೆ ವಿಶೇಷ ಬಾಂಧವ್ಯವಿತ್ತು ಎಂದು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಕೆ.ಕೆ. ಸಿಂಗ್​, ಸುಶಾಂತ್​ ತುಂಬಾ ಬುದ್ಧಿವಂತನಾಗಿದ್ದ. ಓದಿನಲ್ಲೂ ಚುರುಕಾಗಿದ್ದ. ವಿಶಿಷ್ಠವಾದ ಆಲೋಚನೆಗಳನ್ನು ಹೊಂದಿದ್ದ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಎಂದು ಬಣ್ಣಿಸಿದರು.

ಮಗುವಾಗಿ ಬೆಳೆಯುತ್ತಿದ್ದಾಗ ಆತ ನಮ್ಮೊಂದಿಗೆ ಪ್ರತಿಯೊಂದು ವಿಷಯವನ್ನೂ ಹಂಚಿಕೊಳ್ಳುತ್ತಿದ್ದ. ಆದರೆ, ತಾನು ಒಬ್ಬ ನಟನಾಗಬೇಕು ಎಂದು ನಿರ್ಧರಿಸಿ, ಪೂರಕವಾಗಿ ನಟನೆ ಮತ್ತು ಡಾನ್ಸ್​ ಅನ್ನು ಕಲಿಯುತ್ತಿರುವ ವಿಷಯವನ್ನು ನಮಗೆ ತಿಳಿಸಿರಲಿಲ್ಲ. ಆದರೆ ತನ್ನ ಅಕ್ಕಂದಿರ ಬಳಿ ಈ ವಿಷಯ ಹೇಳಿಕೊಂಡಿದ್ದ. ಕೊನೆಗೆ ಆತ ನಟನಾಗಲು ಹೊರಟಾಗ ನಾವೆಲ್ಲರೂ ಒಟ್ಟಾಗಿ ಆತನನ್ನು ಬೆಂಬಲಿಸಿದ್ದೆವು. ನಟನಾ ಕ್ಷೇತ್ರದಲ್ಲಿ ಆತ ಉನ್ನತ ಸ್ಥಾನಕ್ಕೆ ಏರುತ್ತಾನೆ ಎಂಬ ನಂಬಿಕೆ ನಮ್ಮಲ್ಲಿತ್ತು ಎಂದು ತಿಳಿಸಿದರು.

ಸ್ವತಂತ್ರ ಬದುಕಿನ ಅಭಿಲಾಷೆ ಹೊಂದಿದ್ದ ಆತ ತುಂಬಾ ಜವಾಬ್ದಾರಿಯುಳ್ಳ ವ್ಯಕ್ತಿಯಾಗಿದ್ದ. ಹಾಗಾಗಿ ನಾವು ಆತನ ಪ್ರತಿಯೊಂದು ನಿರ್ಧಾರವನ್ನು ಮುಕ್ತವಾಗಿ ಬೆಂಬಲಿಸುತ್ತಿದ್ದೆವು ಎಂದು ಹೇಳಿದರು.

ನನ್ನಲ್ಲಿ ಪ್ರತಿಯೊಂದು ವಿಷಯವನ್ನು ಹಂಚಿಕೊಳ್ಳುತ್ತಿದ್ದ ಆತ, ಸಾಯುವ ಕೆಲವು ದಿನಗಳ ಮೊದಲು ಅದೆಲ್ಲವನ್ನೂ ನಿಲ್ಲಿಸಿದ್ದ. ಏನೊಂದು ತಿಳಿಸುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net