ಕಾರ್​ ಬೇಕು ಅಂತ ಅಭಿಮಾನಿ ಕೇಳಿದ್ದಿಕ್ಕೆ ಸೋನು ಕೊಟ್ಟ ಉತ್ತರ ಇದು ...

Sonu Sood - Final
Published on

ಸಂಕಷ್ಟದಲ್ಲಿರುವವರಿಗೆ ಸೋನು ಸೂದ್​ ಹೇಗೆಲ್ಲಾ ಸಹಾಯ ಮಾಡಿದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಈ ಕೆಲಸ ಇನ್ನೂ ನಿಂತಿಲ್ಲ. ಹಿಂದೊಮ್ಮೆ ತಮ್ಮ ಊರಿಗೆ ಹೋಗಬೇಕು ಎಂದವರನ್ನು ಬಸ್​ ಮಾಡಿ ಕಳುಹಿಸಿದ್ದ ಸೋನು, ಇದೀಗ ಗಣೇಶ ಚತುರ್ಥಿ ಹಬ್ಬಕ್ಕೆ ಮನೆಗೆ ಹೋಗಬೇಕು ಎಂದು ಬಯಸುವವರನ್ನು ಅವರು ಬಸ್​ ಮಾಡಿ ಕಳುಹಿಸುತ್ತಿದ್ದಾರೆ.

ಸೋನು ಸಹಾಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಏನೇನೋ ಕೇಳುವವರು, ತಮಾಷೆ ಮಾಡುವವರು ಸಹ ಇದ್ದಾರೆ. ಇತ್ತೀಚೆಗೊಬ್ಬ ರಾಜಸ್ಥಾನದಲ್ಲಿರುವ ತನ್ನ ಹೆಂಡತಿಯ ತಾತನ ಮನೆಗೆ ಹೋಗುವುದಕ್ಕೆ ಒಂದು ವಾರದ ಮಟ್ಟಿಗೆ ಕಾರ್​ ಸಿಗುತ್ತದಾ ಎಂದು ಸೋನು ಅವರನ್ನು ಕೇಳಿದ್ದಾನೆ. ಕಾರು ಸಿಕ್ಕರೆ, ತಾನೇ ಡ್ರೈವ್​ ಮಾಡಿಕೊಂಡು ಹೋಗಿ ಬರುವುದಾಗಿ ಹೇಳಿದ್ದಾನೆ.

ಇದಕ್ಕೆ ಸೋನು ಕೊಟ್ಟ ಉತ್ತರ ಇಂಟರ್​ನೆಟ್​​ನಲ್ಲಿ ಬಹಳ ಜನಪ್ರಿಯವಾಗಿದೆ. ಇಂಥವರಿಗೆ ಅದೇ ಸರಿಯಾದ ಉತ್ತರ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇಷ್ಟಕ್ಕೂ ಸೋನು ಕೊಟ್ಟ ಉತ್ತರವೇನು? ಇಲ್ಲಿದೆ ನೋಡಿ. 'ಒಬ್ಬನೇ ಯಾಕೆ ಹೋಗ್ತೀಯಾ? ನಿನಗೆ ಯಾವ ಕಾರು ಬೇಕು, ಎಸಿ ಎಷ್ಟಿರಬೇಕು ಎಂದು ಹೇಳು. ನಾನೇ ಬೇಕಾದರೆ ನಿನ್ನು ಕರೆದುಕೊಂಡು ಹೋಗುತ್ತೇನೆ' ಎಂದು ಬಾಯಿ ಮುಚ್ಚಿಸಿದ್ದಾರೆ.

ಇದಕ್ಕೂ ಮುನ್ನು ಯಾರೋ ಒಬ್ಬರು ಇಂಟರ್​ನೆಟ್​ ಸ್ಪೀಡ್​ ಹೆಚ್ಚಿಸುವುದಕ್ಕೆ ಸಾಧ್ಯವಾ ಎಂದು ಕೇಳಿದ್ದಕ್ಕೂ, ಸೋನು ಮಜವಾದ ಉತ್ತರ ಕೊಟ್ಟಿದ್ದರು. 'ನಾಳೆಯವರೆಗೂ ಹೇಗಾದರೂ ಮ್ಯಾನೇಜ್​ ಮಾಡುವುದಕ್ಕೆ ಸಾಧ್ಯವಾ? ಸದ್ಯಕ್ಕೆ ಯಾರದ್ದೋ ಕಂಪ್ಯೂಟರ್​ ರಿಪೇರಿ ಮಾಡಿಸುತ್ತಿದ್ದೇನೆ, ಯಾರದ್ದೋ ಮದುವೆ ಫಿಕ್ಸ್​ ಮಾಡುತ್ತಿದ್ದೇನೆ, ಇನ್ನ್ಯಾರದ್ದೋ ರೈಲ್ವೇ ಟಿಕೆಟ್​ ಬುಕ್​ ಮಾಡಿಸುತ್ತಿದ್ದೇನೆ, ಹೀಗೆ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಬ್ಯುಸಿಯಾಗಿರುವುದರಿಂದ ನಾಳೆ ಸಹಾಯ ಮಾಡಲಾ' ಎಂದು ಸೋನು ಉತ್ತರಕೊಟ್ಟಿದ್ದಾರೆ.

ಈ ಮೂಲಕ ಅನಾವಶ್ಯಕವಾಗಿ ಏನೇನೋ ಕೇಳಿ, ತಮಾಷೆ ಮಾಡಿ ತೊಂದರೆ ಕೊಡಬೇಡಿ ಎಂದು ಸೂಚ್ಯವಾಗಿ ಹೇಳಿದ್ದಾರೆ. ಆದರೂ ಜನ ಮಾತ್ರ, ಆಗಾಗ ಸೋನು ಕಾಲೆಳೆಯುತ್ತಲೇ ಇರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net