

ಲಾಕ್ಡೌನ್ ಪ್ರಾರಂಭವಾದಾಗಿನಿಂದ ಸಂಕಷ್ಟದಲ್ಲಿರುವ ಅದೆಷ್ಟು ಜನರ ನೆರವಿಗೆ ಸೋನು ಸೂದ್ ಬಂದಿದ್ದಾರೋ ಹೇಳುವುದು ಕಷ್ಟ. ಆರಂಭದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಬಂದ ಸೋನು, ಅವರೆಲ್ಲರನ್ನೂ ತಮ್ಮ ಸ್ವಂತ ಊರುಗಳಿಗೆ ಕಳಿಸಿಕೊಟ್ಟರು. ಆ ನಂತರ ಬೇರೆಬೇರೆ ರೀತಿಯಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದ ದಟ್ಟ ಕಾನನದಲ್ಲಿ ಅಕ್ಷಯ್ ಕುಮಾರ್!
ಈಗ್ಯಾಕೆ ಈ ವಿಷಯವೆಂದರೆ, ಸೋನು ತಮ್ಮ ಪರೋಪಕಾರಿ ಕೆಲಸವನ್ನು ಇನ್ನಷ್ಟು ಮುಂದುವರೆಸಿದ್ದಾರೆ. ಅಥ್ಲೀಟ್ ಒಬ್ಬರಿಗೆ ಶೂಸ್ ಕೊಡಿಸುವುದರ ಜತೆಗೆ ಐಎಎಸ್ ಆಕಾಂಕ್ಷಿಯೊಬ್ಬರಿಗೆ ಪುಸ್ತಕಗಳನ್ನು ಕೊಡಿಸುವುದಾಗಿ ಅವರು ಪ್ರಾಮಿಸ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸೋನು ಹೇಳಿಕೊಂಡಿದ್ದರು. ಸಹಾಯಕ್ಕೆ ಮನವಿ ಕೋರಿ ಪ್ರತಿದಿನ ತಮಗೆ 32 ಸಾವಿರ ಸಂದೇಶಗಳು ಬರುತ್ತಿವೆ ಎಂದು. ಅದರಂತೆ ಇತ್ತೀಚೆಗೆ ಮನೋಜ್ ಎಂಬ ಅಥ್ಲೀಟ್, ತಮಗೆ ಶೂಸ್ ಬೇಕೆಂದು ಮನವಿ ಸಲ್ಲಿಸಿದ್ದರು. ಮುಂದಿನ ಒಲಂಪಿಕ್ಸ್ನಲ್ಲಿ ಮನೋಜ್ ಭಾಗವಹಿಸುವ ಸಾಧ್ಯತೆ ಇದೆ. ಆದರೆ, ಅವರಿಗೆ ಶೂಗಳ ಮೇಲೆ ಅಷ್ಟೊಂದು ಹಣ ಖರ್ಚು ಮಾಡುವುದಕ್ಕೆ ಕಷ್ಟವಾಗುತ್ತಿರುವುದರಿಂದ, ಸ್ನೇಹಿತರ ಶೂಗಳನ್ನು ಪಡೆದು ಅಭ್ಯಾಸ ನಡೆಸುತ್ತಿರುವುದಾಗಿ ಹೇಳಿದ್ದರು.
ಈ ಟ್ವೀಟ್ ನೋಡಿದ ಸೋನು, 'ಇಟ್ಸ್ ಡನ್ ಭಾಯ್. ವಿಲ್ ಬಿ ಡೆಲಿವರ್ಡ್ ಟುಡೇ' ಎಂದು ಉತ್ತರಿಸಿದ್ದರು. ಅಂದರೆ, ಇವತ್ತು ನಿನಗೆ ಬೇಕಾದ ಶೂಗಳು ಸಿಗುತ್ತವೆ ಎಂದು ಸೋನು ಉತ್ತರಿಸಿದ್ದಾರೆ.
ಇನ್ನು ಪವನ್ ಎನ್ನುವವರು, ತಮ್ಮ ಸಹೋದರಿ ಐಎಎಸ್ ಪರೀಕ್ಷೆಗೆ ಕುಳಿತಿರುವುದರಿಂದ, ಆಕೆಗೆ ಪುಸ್ತಕಗಳ ಅವಶ್ಯಕತೆ ಇದೆ ಎಂದು ಹೇಳಿದ್ದರು. ತಾವು ರೈತ ಕುಟುಂಬದಿಂದ ಬಂದವರಾದ್ದರಿಂದ, ಅಷ್ಟೊಂದು ಖರ್ಚು ಮಾಡಿ ಪುಸ್ತಕಗಳನ್ನು ಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೋನು, ನಾಳೆಯೊಳಗೆ ನಿಮ್ಮ ಪುಸ್ತಕಗಳು ಸಿಗಲಿವೆ ಎಂಬ ಭರವಸೆಯನ್ನು ನೀಡಿದ್ದಾರೆ.