

ಸಲ್ಮಾನ್ ಖಾನ್ ಅವರ ಕುಟುಂಬದವರು ತಮ್ಮನ್ನು ತುಳಿದರು, ಸರ್ವನಾಶ ಮಾಡಿದರು ಎಂದು ಇತ್ತೀಚೆಗಷ್ಟೇ ದಬಾಂಗ್ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್ ದೂರಿದ್ದರು. ಈ ವಿಷಯವಾಗಿ, ಸಲ್ಮಾನ್ ಖಾನ್ ಅವರ ಸಹೋದರ ಸೋಹೈಲ್ ಖಾನ್, ಕೊನೆಗೂ ಅಭಿನವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸ್ವಜನಪಕ್ಷಪಾತದ ಕುರಿತಾಗಿ ಚರ್ಚೆಯಾಗುತ್ತಿದೆ. ಚಿತ್ರರಂಗದ ಗಟ್ಟಿ ಸ್ಥಾನದಲ್ಲಿರುವವರು ಹೇಗೆ ಹೊಸಬರನ್ನು ತುಳಿಯುತ್ತಿದ್ದಾರೆ ಎಂದು ಹಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತು ನಿರ್ದೇಶಕ ದಬಾಂಗ್ ನಿರ್ದೇಶಕ ಅಭಿನವ್ ಕಶ್ಯಪ್ ಸಹ ಮಾತನಾಡಿದ್ದರು.
ಸಲ್ಮಾನ್ ಖಾನ್ ಸಹೋದರರು ತಮಗೆ ಮಾನಸಿಕ ಕಿರುಕುಳ ನೀಡಿದ್ದರಿಂದ, ಕಳೆದ 10 ವರ್ಷದಿಂದ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್ ಸಹೋದರ ಅರ್ಬಾಜ್ ಖಾನ್, ಅಭಿನವ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು.
ಈ ಕುರಿತು ಮಾತನಾಡಿರುವ ಅರ್ಬಾಜ್ ಖಾನ್, ಅಭಿನವ್ ನಮ್ಮ ಮೇಲೆ ಮಾಡಿರುವ ಆರೋಪಗಳೆಲ್ಲಾ ಸುಳ್ಳು. ನಮ್ಮ ಇಡೀ ಕುಟುಂಬದ ಘನತೆಯನ್ನು ಮಣ್ಣುಪಾಲು ಮಾಡುವುದಕ್ಕೆ ಹೊರಟಿದ್ದರು ಅಭಿನವ್. ನಮಗೆ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಕುರಿತು ಮಾತನಾಡಿದ್ದು, ಅಭಿನವ್ ಮಾಡಿದ್ದು ಸರಿಯಾ ಎಂದು ಪ್ರಶ್ನಿಸಿದ್ದಾರೆ. ಅವರ ಸೋಲಿಗೆ ನಮ್ಮನ್ನು ದೂರುವುದು ಎಷ್ಟು ಸರಿ? ಒಂದು ಚಿತ್ರವನ್ನು ಸೋಲಿಸುವ ಶಕ್ತಿ ನಮಗಿದೆಯಾ? ದಬಾಂಗ್ ಚಿತ್ರದ ನಂತರ ದಬಾಂಗ್ 2 ಚಿತ್ರ ನಿರ್ದೇಶಿಸುವುದಕ್ಕೆ ಕೇಳಿದ್ದೆವು. ಆದರೆ, ಅದಕ್ಕೆ ಅವರು ಒಪ್ಪಲಿಲ್ಲ. ಅಲ್ಲಿಗೆ ಪ್ರಕರಣ ಮುಗಿಯಿತು. ಹೀಗಿರುವಾಗ ಇಷ್ಟು ವರ್ಷಗಳ ಮೇಲೆ ನಮ್ಮ ಮೇಲೆ ವೃಥಾ ಆರೋಪ ಹೊರಿಸುವುದು ಎಷ್ಟು ಸರಿ? ನಾನು ನನ್ನ ಚಿತ್ರಜೀವನದಲ್ಲಿ ಇದುವರೆಗೂ 40ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ-ಚಿತ್ರಕಥೆ ಬರೆದಿದ್ದೇನೆ. ನನ್ನದೇ ಗೌರವ ಸಂಪಾದಿಸಿದ್ದೇನೆ. ಹಾಗಿರುವಾಗ ನನ್ನನ್ನು ಈ ವಿಷಯದಲ್ಲಿ ಅವರು ಎಳೆದು ತಂದರು. ಅವರಿಗೆ ನಾಚಿಕೆ ಆಗಬೇಕು ಎಂದು ಸಲೀಂ ಖಾನ್ ಪ್ರತಿಕ್ರಿಯಿಸಿದ್ದಾರೆ.