ರಿಯಾ ಜತೆಗೆ ಬ್ರೇಕ್-​ಅಪ್​ ಆಗಿದ್ದು ಸುಶಾಂತ್​ ಸಾವಿಗೆ ಕಾರಣವಾಯಿತಾ?

Rhea - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸರು ಚುರುಕುಗೊಳಿಸಿದ್ದಾರೆ. ಸುಶಾಂತ್​ ಅವರ ಪ್ರೇಯಸಿ ಎನ್ನಲಾದ ರಿಯಾ ಚಕ್ರವರ್ತಿಯನ್ನು ಗುರುವಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸುಮಾರು 09 ಗಂಟೆಗಳ ಕಾಲ ವಿಚಾರಣೆ ನಡೆಸಿ ಮಹತ್ವದ ವಿಷಯಗಳನ್ನು ಸಂಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸುಶಾಂತ್​ಗೆ ಬಹಳ ಹತ್ತಿರವಾಗಿದ್ದವರೆಂದರೆ, ಅದು ರಿಯಾ ಚಕ್ರವರ್ತಿ. ಇಬ್ಬರೂ ಜತೆಯಾಗಿದ್ದಷ್ಟೇ ಅಲ್ಲ, ಸಾಕಷ್ಟು ಸಮಯವನ್ನು ಒಟ್ಟಿಗೆ ಕಳೆದಿದ್ದಾರೆ. ಅದೇ ಕಾರಣಕ್ಕೆ ರಿಯಾ ಅವರನ್ನು ಗುರುವಾರ ವಿಚಾರಣೆಗೆ ಒಳಪಡಿಸಲಾಗಿದೆ.

ಈ ವಿಚಾರಣೆ ವೇಳೆಯಲ್ಲಿ ತಿಳಿದು ಬಂದ ಮಹತ್ವದ ಅಂಶ ಎಂದರೆ, ಲಾಕ್​ಡೌನ್​ ಸಂದರ್ಭದಲ್ಲಿ ಸುಶಾಂತ್​ ಮತ್ತು ರಿಯಾ ಲಿವ್​-ಇನ್​ ಸಂಬಂಧದಲ್ಲಿ ಇದ್ದಿದ್ದು. ಈ ವಿಷಯವನ್ನು ಒಪ್ಪಿಕೊಂಡಿರುವ ರಿಯಾ, ಸದ್ಯದಲ್ಲೇ ಒಂದು ಮನೆಯನ್ನು ಖರೀದಿಸಬೇಕು ಎಂದು ಇಬ್ಬರೂ ಯೋಚಿಸಿದ್ದರಂತೆ. ಅಷ್ಟೇ ಅಲ್ಲ, ಈ ವರ್ಷದ ಕೊನೆಗೆ ಮದುವೆಯಾಗಬೇಕು ಎಂದು ನಿರ್ಧರಿಸಿದ್ದರಂತೆ. ಆದರೆ, ಇತ್ತೀಚೆಗೆ ಕಾರಣಾಂತರಗಳಿಂದ ರಿಯಾ, ಸುಶಾಂತ್​ ಮನೆ ಮತ್ತು ಬದುಕಿನಿಂದ ಹೊರನಡೆದಿದ್ದರಂತೆ. ಅದಾಗಿ ಕೆಲವೇ ದಿನಗಳಲ್ಲಿ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಂತವೆಂದರೆ, ಕಳೆದ ಶನಿವಾರ ರಾತ್ರಿ ಸಹ ಸುಶಾಂತ್​, ರಿಯಾಗೆ ಕರೆ ಮಾಡಿದ್ದಾರೆ. ಆದರೆ, ರಿಯಾ ಫೋನ್​ ಎತ್ತಿಲ್ಲ.

ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪೊಲೀಸರು, ಸುಶಾಂತ್​ ಬಾಳಿನಿಂದ ರಿಯಾ ಹೊರನಡೆದಿದ್ದೇ, ಆತ್ಮಹತ್ಯೆಗೆ ಕಾರಣವಾಯಿತಾ ಎಂಬ ಅಂಶದ ಮೇಲೆ ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್​ ಮತ್ತು ರಿಯಾ ಅವರ ನಡುವೆ ಎಕ್ಸ್​ಚೇಂಜ್​ ಆದ ಕೆಲವು ಟೆಕ್ಸ್ಟ್​ ಮೆಸೇಜ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಅವರ ವಿಚಾರಣೆ ನಿನ್ನೆ ನಡೆಸಲಾಗಿತ್ತು. ತಮ್ಮ ಮಗನಿಗೆ ಡಿಪ್ರೆಶನ್​ ಇದ್ದ ವಿಚಾರ, ತಮಗೆ ಗೊತ್ತೇ ಇರಲಿಲ್ಲ ಎಂದು ಕೆ.ಕೆ. ಸಿಂಗ್​ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ಹೇಳಲಾಗಿದೆ. ಅದಲ್ಲದೆ, ಸುಶಾಂತ್​ ಅವರ ಮ್ಯಾನೇಜರ್​, ನಿರ್ದೇಶಕ ಮುಕೇಶ್​ ಛಾಬ್ರಾ ಸೇರಿದಂತೆ 10 ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net