

ಚೆನ್ನೈ: ಅಪ್ಪ- ಅಮ್ಮ ದೂರವಾದರೆ ಮಕ್ಕಳು ಬೇಸರಗೊಳ್ಳುವುದು ಸಹಜ. ಆದರೆ, ಕಮಲ್ ಹಾಸನ್ ಮತ್ತು ಸಾರಿಕಾ ಅವರ ಪುತ್ರಿ ಶ್ರುತಿ ಮಾತ್ರ, ತಮ್ಮ ತಂದೆ-ತಾಯಿ ದೂರ ಆಗಿದ್ದೇ ಒಳ್ಳೇದಾಯ್ತು ಎಂದು ಹೇಳಿದ್ದು ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದೆ.
ಇಷ್ಟಕ್ಕೂ ಶ್ರುತಿ ಹಾಗೆ ಹೇಳಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಇತ್ತೀಚೆಗೆ ಶ್ರುತಿ ಒಂದು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಮಲ್ ಹಾಸನ್ ಮತ್ತು ಸಾರಿಕಾ ಡೈವೋರ್ಸ್ ಪ್ರಕರಣದ ಬಗ್ಗೆ ಶ್ರುತಿಗೆ ಪ್ರಶ್ನೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಶ್ರುತಿ, ಅವರಿಬ್ಬರೂ ಡೈವೋರ್ಸ್ ಪಡೆದಿದ್ದೇ ಒಳ್ಳೆಯದಾಯಿತು ಎಂದಿದ್ದಾರೆ.
'ಅವರಿಬ್ಬರೂ ಮಾನಸಿಕವಾಗಿ ದೂರವಾಗಿದ್ದರು. ಅಂತವರನ್ನು ಒಟ್ಟಿಗೆ ಸಂಸಾರ ಮಾಡಿ ಎಂದು ಹೇಳುವುದು ಕಷ್ಟ. ಇಷ್ಟವಿಲ್ಲದಿದ್ದರೂ ಒತ್ತಾಯ ಮಾಡುವುದು ತಪ್ಪು. ಹಾಗಾಗಿ ಅವರು ದೂರವಾಗಿದ್ದೇ ಒಳ್ಳೆಯದು' ಎಂದಿದ್ದಾರೆ ಶ್ರುತಿ.
ತಮ್ಮ ತಾಯಿಗಿಂತ ತಂದೆಯ ಜತೆಗೆ ತಾನು ಹೆಚ್ಚು ಹತ್ತಿರವಿರುವುದಾಗಿ ಹೇಳಿರುವ ಶ್ರುತಿ, 'ಅಮ್ಮ ದೂರವಿದ್ದರೂ ನಮ್ಮೆಲ್ಲರ ಜೀವನದ ಒಂದು ಭಾಗ ಎಂದರೆ ತಪ್ಪಿಲ್ಲ. ಅವರು ದೂರವಿದ್ದರೂ, ನಮ್ಮೆಲ್ಲರ ಜತೆಗೆ ಚೆನ್ನಾಗಿಯೇ ಇದ್ದಾರೆ' ಎಂದು ಶ್ರುತಿ ಹೇಳಿಕೊಂಡಿದ್ದಾರೆ.