'ಪೆಟ್ರೋಮ್ಯಾಕ್ಸ್' ಎರಡನೇ ಹಂತದ ಚಿತ್ರೀಕರಣ ಶುರು ...

Petromax - Final
Published on

ಮೈಸೂರು: ಸತೀಶ್​ ನೀನಾಸಂ ಮತ್ತು ಹರಿಪ್ರಿಯಾ ಅಭಿನಯದಲ್ಲಿ ವಿಜಯಪ್ರಸಾದ್​ ನಿರ್ದೇಶಿಸುತ್ತಿರುವ 'ಪೆಟ್ರೋಮ್ಯಾಕ್ಸ್​' ಚಿತ್ರದ ಎರಡನೆಯ ಹಂತದ ಚಿತ್ರೀಕರಣ ಇದೀಗ ಶುರುವಾಗಿದೆ.

ಲಾಕ್​ಡೌನ್​ ತೆರವಾಗಿ ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಸಿಗುತ್ತಿದ್ದಂತಯೇ, ವಿಜಯಪ್ರಸಾದ್​ ನಿರ್ದೇಶನದಲ್ಲಿ 'ಪೆಟ್ರೋಮ್ಯಾಕ್ಸ್​' ಎಂಬ ಚಿತ್ರದಲ್ಲಿ ನಟಿಸುವುದಾಗಿ ಘೋಷಿಸಿದ್ದರು. ಅದರಂತೆ, ಅಕ್ಟೋಬರ್​ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ, ಮೈಸೂರಿನಲ್ಲಿ 15 ದಿನಗಳ ಒಂದು ಹಂತದ ಚಿತ್ರೀಕರಣ ಸಹ ಮುಗಿದಿತ್ತು.

ಈ ಮಧ್ಯೆ, 'ದಸರಾ' ಚಿತ್ರದ ಚಿತ್ರೀಕರಣದಲ್ಲಿ ಸತೀಶ್​ ಭಾಗವಹಿಸಿದ್ದರು. ಇನ್ನು, 'ಎವರು' ಚಿತ್ರದ ಕನ್ನಡ ರೀಮೇಕ್​ನ ಮೊದಲ ಹಂತದ ಚಿತ್ರೀಕರಣದಲ್ಲಿ ಹರಿಪ್ರಿಯಾ ತೊಡಗಿಸಿಕೊಂಡಿದ್ದರು. ಈಗ ಇಬ್ಬರೂ ಮತ್ತೆ ಚಿತ್ರತಂಡಕ್ಕೆ ಮರಳಿರುವುದರಿಂದ, ಎರಡನೆಯ ಹಂತದ ಚಿತ್ರೀಕರಣ ಶುರುವಾಗಿದೆ.

ಇದು, ಬರೀ ಎರಡನೆಯ ಹಂತದ ಚಿತ್ರೀಕರಣವಷ್ಟೇ ಅಲ್ಲ, ಕೊನೆಯ ಹಂತದ ಚಿತ್ರೀಕರಣ ಕೂಡಾ. ಈಗಾಗಲೇ ಚಿತ್ರದ ಮೊದಲಾರ್ಧದ ಚಿತ್ರೀಕರಣ ಸಂಪೂರ್ಣವಾಗಿದೆಯಂತೆ. ಇನ್ನು ದ್ವಿತೀಯಾರ್ಧದ ಚಿತ್ರೀಕರಣ ಬಾಕಿ ಇದ್ದು, ಈ ತಿಂಗಳಲ್ಲಿ ಸತತವಾಗಿ ಚಿತ್ರೀಕರಣ ಮುಗಿಯುತ್ತದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ವಿಡಿಯೋವೊಂದರಲ್ಲಿ ಮಾತನಾಡಿರುವ ವಿಜಯಪ್ರಸಾದ್​, ಈ ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಚಿತ್ರವನ್ನು ಬಿಡಗುಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

'ಪೆಟ್ರೋಮ್ಯಾಕ್ಸ್​' ಚಿತ್ರದಲ್ಲಿ ಸತೀಶ್​ ಮತ್ತು ಹರಿಪ್ರಿಯಾ ಜೊತೆಗೆ ಕಾರುಣ್ಯ ರಾಮ್​, 'ಗೊಂಬೆಗಳ ಲವ್​' ಖ್ಯಾತಿಯ ಅರುಣ್​ ಮುಂತಾದವರು ನಟಿಸುತ್ತಿದ್ದಾರೆ. ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ ವಿಜಯಪ್ರಸಾದ್​. ಅನೂಪ್​ ಸೀಳಿನ್​ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ನಿರಂಜನ್​ ಬಾಬು ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net