

ಬೆಂಗಳೂರು: ಕಿಚ್ಚ ಸುದೀಪ್ ನಾಯಕನಾಗಿ ನಟಿಸುತ್ತಿರುವ ಫ್ಯಾಂಟಮ್ ಅದ್ದೂರಿ ವೆಚ್ಚದಲ್ಲಿ ಸಿದ್ಧವಾಗುತ್ತಿದೆ. ಬಹುತೇಕ ಸೆಟ್ನಲ್ಲಿಯೇ ಈ ಸಿನಿಮಾ ನಿರ್ಮಾಣವಾಗುತ್ತಿರುವುದರಿಂದ ಮಿನಿ ಅರಣ್ಯವನ್ನೇ ಹೈದರಾಬಾದ್ನ ಅನ್ನಪೂರ್ಣ ಮತ್ತು ರಾಮೋಜಿ ರಾವ್ ಸ್ಟುಡಿಯೋದಲ್ಲಿ ನಿರ್ಮಿಸಿ ಚಿತ್ರೀಕರಣ ಮಾಡಿಕೊಂಡಿದೆ. ಇದೀಗ ಕೇರಳದಲ್ಲಿ ಚಿತ್ರದ ಕೊನೇ ಹಂತದ ಶೂಟಿಂಗ್ನಲ್ಲಿ ಸುದೀಪ್ ಭಾಗವಹಿಸಿದ್ದಾರೆ.
ಹೌದು, ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಫ್ಯಾಂಟಮ್ ಚಿತ್ರದ ಶೂಟಿಂಗ್ಗೆ ಚಾಲನೆ ನೀಡಲಾಗಿತ್ತು. ಇದೀಗ ಬಹುತೇಕ ಚಿತ್ರೀಕರಣ ಮುಗಿಸಿಕೊಂಡು, ಕೊನೇ ಹಂತದ ಶೂಟಿಂಗ್ ಶುರುವಾಗಿದೆ. ಚಿತ್ರದ ಕೊನೇ ಭಾಗದ ದೃಶ್ಯವನ್ನು ಸೆರೆಹಿಡಿಯುತ್ತಿದ್ದು, ಇನ್ನೇನು ಶೀಘ್ರದಲ್ಲಿ ಕುಂಬಳಕಾಯಿ ಒಡೆದು ಮುಂದಿನ ಕೆಲಸಗಳತ್ತ ದೃಷ್ಟಿ ಹಾಯಿಸುವ ಲೆಕ್ಕಾಚಾರದಲ್ಲಿದೆ ತಂಡ.
ಸದ್ಯ ಕೊನೇ ಹಂತದ ಶೂಟಿಂಗ್ನಲ್ಲಿ ಭಾಗವಹಿಸಿರುವ ಸುದೀಪ್, ‘ಫ್ಯಾಂಟಮ್ ಚಿತ್ರದ ಕೊನೇ ಹಂತದ ಶೂಟಿಂಗ್ ಶುರುವಾಗಿದೆ. ಲೊಕೇಷನ್ ಅದ್ಬುತವಾಗಿದೆ. ಅಷ್ಟೇ ಅಚ್ಚುಕಟ್ಟಾಗಿ ಸೆಟ್ ನಿರ್ಮಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ. ಇನ್ನು ಜಾಕ್ ಮಂಜು ಜತೆಗೆ ಅಲಂಕಾರ್ ಪಾಂಡಿಯನ್ ನಿರ್ಮಾಣದಲ್ಲಿ ಕೈ ಜೋಡಿಸಿದ್ದು, ಇತ್ತೀಚೆಗಷ್ಟೇ ಅವರನ್ನು ತಂಡ ಬರಮಾಡಿಕೊಂಡಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.