ಹುಟ್ಟುಹಬ್ಬದ ದಿನವೇ ತಂದೆಯಾದ ಪವನ್​ ಒಡೆಯರ್​ ...

Pavan Wodeyar - Final
Published on

ಬೆಂಗಳೂರು: ಇತ್ತೀಚೆಗಷ್ಟೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಿರ್ದೇಶಕ ಪವನ್​ ಒಡೆಯರ್-ಅಪೇಕ್ಷಾ ದಂಪತಿಯು ಪ್ರೆಗ್ನನ್ಸಿ ಫೋಟೋಶೂಟ್​ ಮಾಡಿಸಿ ಸಂಭ್ರಮಿಸಿತ್ತು. ಅದಾದ ಕೆಲವೇ ದಿನಗಳಲ್ಲಿ ಕುಟುಂಬದವರ ಸಮ್ಮುಖದಲ್ಲಿ ಸೀಮಂತ ಕಾರ್ಯವೂ ನಡೆದಿತ್ತು.

ಇಂದು ಬೆಳಿಗ್ಗೆ, ನಗರದ ಖಾಸಗೀ ಆಸ್ಪತ್ರೆಯಲ್ಲಿ ಅಪೇಕ್ಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ, ಇಂದು ಪವನ್​ ಒಡೆಯರ್​ ಅವರ ಹುಟ್ಟುಹಬ್ಬ. ಅವರ ಹುಟ್ಟಿದ ದಿನದಂದೇ ಮಗ ಸಹ ಹುಟ್ಟಿರುವುದು ವಿಶೇಷ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಸಿಹಿಸುದ್ದಿ ಹಂಚಿಕೊಂಡಿರುವ ಪವನ್​, ಹುಟ್ಟುಹಬ್ಬದ ದಿನದಂದೇ ತಂದೆಯಾಗಿರುವುದು ತಮಗೆ ಸಿಕ್ಕ ಅದ್ಭುತ ಉಡುಗೊರೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಒಂದು ಫೋಟೋ ಸಹ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಪುಟ್ಟ ಮಗುವಿನ ಕಾಲು ಹಿಡಿದುಕೊಂಡಿರುವ ಪವನ್​ ಮತ್ತು ಅವರ ಪತ್ನಿಯನ್ನು ನೋಡಬಹುದು.

ಇನ್ನು ಇಂದು ಬೆಳಿಗ್ಗೆಯಿಂದಲೇ ಚಿತ್ರರಂಗದ ಮಂದಿ ಮತ್ತು ಪವನ್​ ಅವರ ಅಭಿಮಾನಿಗಳು, ಪವನ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದರು. ಇನ್ನು ಗಂಡು ಮಗುವಾದ ಸುದ್ದಿ ಹೊರಬಿದ್ದ ನಂತರ ಪವನ್​ ಮತ್ತು ಅವರ ಮಗನಿಗೆ ಶುಭಹಾರೈಕೆಗಳ ಮಹಾಪೂರವೇ ಹರಿದಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net