ಪಾರ್ಟಿ ಮೂಡ್​ನಲ್ಲಿ ನಿಶ್ವಿಕಾ - ಚಂದನ್ ಶೆಟ್ಟಿ ಹೊಸ ಆಲ್ಬಂನಲ್ಲಿ ನಿವೇದಿತಾ

Chandan Shetty and Nivedita Gowda Nishwika
Published on

ಬೆಂಗಳೂರು : ಲಾಕ್​ಡೌನ್ ತೆರವಾಗಿ ನಟಿಯರೆಲ್ಲ ಹೊಸಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರುವಾಗ, ನಿಶ್ವಿಕಾ ನಾಯ್ಡು ಮಾತ್ರ ಇದುವರೆಗೂ ಯಾವ ಚಿತ್ರದಲ್ಲೂ ನಟಿಸುತ್ತಿರುವ ಸುದ್ದಿ ಇಲ್ಲ. ಇದೀಗ ಅವರು ಪಾರ್ಟಿ ಸಾಂಗ್​ನಲ್ಲಿ ಕಾಣಿಸಿಕೊಳ್ಳುವುದಕ್ಕೆ ತಯಾರಿ ನಡೆಸಿದ್ದಾರೆ. ಚಂದನ್ ಶೆಟ್ಟಿ ಅವರ ‘ಪಾರ್ಟಿ ಫ್ರೀಕ್’ ಎಂಬ ಹಾಡಿನಲ್ಲಿ ನಿಶ್ವಿಕಾ ಹೆಜ್ಜೆ ಹಾಕಲಿದ್ದಾರೆ.

‘ಮೂರೇ ಮೂರು ಪೆಗ್ಗಿಗೆ ...’ ಮತ್ತು ‘ಟಕೀಲಾ’ ಹಾಡನ್ನು ಹೊರತುಪಡಿಸಿ ಚಂದನ್ ಅವರ ಬತ್ತಳಿಕೆಯಿಂದ ಬೇರಾವ ಪಾರ್ಟಿ ಸಾಂಗ್ ಕಿವಿಗಪ್ಪಳಿಸಿರಲಿಲ್ಲ. ಇದೀಗ ಹೊಸ ವರ್ಷದ ಪ್ರಯುಕ್ತ ದುಬಾರಿ ವೆಚ್ಚದಲ್ಲಿ ನಿರ್ವಣವಾಗಲಿರುವ ಹಾಡಿನೊಂದಿಗೆ ಆಗಮಿಸುತ್ತಿದ್ದಾರೆ. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಹಾಡು ಮೂಡಿಬರಲಿದ್ದು, ಬೆಂಗಳೂರಿನ ದೊಡ್ಡ ದೊಡ್ಡ ಹೋಟೆಲ್ ಮತ್ತು ಪಬ್​ಗಳಲ್ಲಿ ಈ ಹಾಡಿನ ಚಿತ್ರೀಕರಣವಾಗಲಿದೆ.

ಚೈತನ್ಯ ಲಕಂಸಾನಿ ನಿರ್ಮಾಣ ಮಾಡುತ್ತಿರುವ ಈ ಹಾಡಿಗೆ ಚಂದನ್ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಧ್ವನಿ ನೀಡಿ ಹಾಡಿನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಹಾಡಿನಲ್ಲಿರಲಿದ್ದು, ಚಂದನ್ ಪತ್ನಿ ನಿವೇದಿತಾ ಗೌಡ ಸಹ ಈ ಆಲ್ಬಲ್ಲಿರಲಿದ್ದಾರೆ. ಅದೇ ರೀತಿ ವಿಶೇಷ ಪಾತ್ರದಲ್ಲಿ ನಟ ಧರ್ಮ ಅವರನ್ನೂ ತೋರಿಸಲಿದ್ದಾರೆ ಚಂದನ್. ಇನ್ನು ಈ ಹಾಡಿಗೆ ಶ್ರೀಶ ಕುದುವಳ್ಳಿ ಛಾಯಾಗ್ರಹಣ ಮಾಡಿದರೆ, ಅಜಿತ್ ಶ್ರೀರವಿ ವಸ್ತ್ರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ. ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಕರೊನಾ ಹಿನ್ನೆಲೆಯಲ್ಲಿ ನ್ಯೂ ಇಯರ್ ಪಾರ್ಟಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಕುಟುಂಬದೊಟ್ಟಿಗೆ ಆಚರಿಸುವಂತೆ ಹೇಳಿದೆ. ಅದನ್ನೇ ಗಮನದಲ್ಲಿಟ್ಟುಕೊಂಡು, ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಈ ಹಾಡನ್ನು ಚಿತ್ರೀಕರಿಸಲಿದ್ದು, ಯುನೈಟ್ ಆಡಿಯೋಸ್​ನಲ್ಲಿ ಡಿ.26ರಂದು ಬಿಡುಗಡೆ ಮಾಡುವುದಕ್ಕೆ ತಂಡ ಮುಂದಾಗಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net